ಗದಗ : ರಾಜ್ಯಪಾಲರು ಸುಗ್ರೀವಾಜ್ಞೆ ತಿರಸ್ಕರಿಸಿದ್ದಕ್ಕೆ ತಪ್ಪು ಗ್ರಹಿಕೆ ಕಾರಣವಿರಬಹುದು ಎಂದು ಕಾನೂನು, ನ್ಯಾಯ ಸಚಿವ ಎಚ್.ಕೆ ಪಾಟೀಲ್ ಪ್ರತಿಕ್ರಿಯಿಸಿದರು. ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸುಗ್ರೀವಾಜ್ಞೆ ತಿರಸ್ಕರಿಸಿದ ಕುರಿತು ಮಾತನಾಡಿ, ನಾವು ಕಳುಹಿಸಿದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ತಮ್ಮ ಕೆಲವು ಅವಲೋಕನಗಳಿಂದ ವಾಪಾಸ್ ಕಳುಹಿಸಿದ್ದಾರೆ. ಇದಕ್ಕೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆ ಇರಬಹುದು ಎಂದಿದ್ದಾರೆ.
ಫೈನಾನ್ಸ್ ನವರು 3 ಲಕ್ಷ ರೂ ಕೊಡಲು ಇರುತ್ತದೆ. 5 ಲಕ್ಷ ರೂ ವರೆಗೆ ದಂಡ ಹೇಗೆ ಹಾಕುತ್ತೀರಿ ಅಂತ ಕೇಳಿದ್ದಾರೆ. ಸಾಲ ಎಷ್ಟು ಕೊಟ್ಟಿದ್ದೀರಿ ಎಂಬುದು ಮುಖ್ಯವಲ್ಲ. ಸಾಲಗಾರರ ಮೇಲೆ ಹಿಂಸೆ ಎಷ್ಟು ಆಗಿದೆ, ಎಷ್ಟು ಒತ್ತಡ ಆಗಿದೆ ಎಂಬುದು ದಂಡವೆ ಹೊರತು, ಸಾಲದ ಪ್ರಮಾಣದ ಮೇಲೆ ದಂಡ ಹಾಕುವುದು ಇರುವುದಿಲ್ಲ. ಶಿಕ್ಷೆ ಪ್ರಮಾಣ ಹೆಚ್ಚು ಇದೆ. ಆತ್ಮಹತ್ಯೆ ನಡೆಯುವುದು, ಸಾಯುವಂತೆ ಹೊಡೆಯುವುದು, ಕುಟುಂಬವೇ ನಾಶ ಆಗುವಂತಹದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಯಾರು ನೊಂದಣಿ ಇಲ್ಲದೆ ಮನಬಂದಂತೆ ಸಾಲ ಕೊಟ್ಟು, ಹಿಂಸಾತ್ಮಕ ವಸೂಲಿ ಮಾಡುವುದುನ್ನು ಮೂಲಭೂತ ಹಕ್ಕು ಅನ್ನಲು ಸಾಧ್ಯನಾ..?, 6 ಅಂಶಗಳ ಬಗ್ಗೆ ನಾನು ರಾಜ್ಯ ಪಾಲರಿಗೆ ತಕ್ಷಣ ಕಡತಗಳನ್ನು ನಮ್ಮ ವಿವರಣೆಯೊಂದಿಗೆ ಕಳುಹಿಸುತ್ತೇನೆ ಎಂದರು.
ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರಾ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಟಿಪ್ಪಣಿ ಮಾಡುವುದಿಲ್ಲ… ಸಮಾಜದ ಹಿತವಾಗಿರುವ ಸುಗ್ರೀವಾಜ್ಞೆ, ಸದನ ಕೂಡಿದಾಗ ಮಾತನಾಡಿ ಅಂದಿದ್ದಾರೆ. ಪ್ರತಿದಿನ ಎರಡು-ಮೂರು ಆತ್ಮಹತ್ಯೆ ನೋಡಿಕೊಂಡು ಕೂಡಲು ಆಗುತ್ತಾ?, ಜನ ಮೃತಪಡಬಾರದೆಂದು ಚಿಂತನೆ ಮಾಡಿ ಈ ಹೆಜ್ಜೆ ಇಟ್ಟಿದ್ದೇವೆ ಎಂದರು.
ಇನ್ನೂ ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಆಪ್ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಹಳಷ್ಟು ಜನರ ನಿರೀಕ್ಷೆಯಿಂದ ಆಪ್ ಪಕ್ಷ ಬಹಳ ಮೇಲಕ್ಕೆ ಬಂದಿತ್ತು. ಅವರು ಹಾಕಿಕೊಂಡ ಕೆಲವು ನೀತಿಗಳು, ಭರವಸೆಗಳನ್ನು ನೋಡಿದ್ರೆ, ಬಹಳ ಜನರ ಆಕರ್ಷಣೆ ಅವರ ಕಡೆಗಿತ್ತು. ಈ ಜನಾದೇಶ ನೋಡಿದ್ರೆ, ಮತ್ತೆ ನಾವು ಮರು ಪರಿಶೀಲನೆ ಮಾಡಬೇಕಾಗುತ್ತೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ವಯಸ್ಕರಿಗಿಂತ ಮತದಾರರು ಹೆಚ್ಚಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಕುರಿತು ಮಾತನಾಡಿ, ರಾಹುಲ್ ಗಾಂಧಿ ಅವರು ಎತ್ತಿರುವ ವಿಷಯ ಪ್ರಮುಖವಾದದ್ದು. ರಾಷ್ಟ್ರೀಯ ವಿಷಯವಾಗಿ ಈ ವಿಷಯ ತೆಗೆದುಕೊಳ್ಳಬೇಕಿದೆ. ಎಲ್ಲಾ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಆದ ಲೋಪಗಳು ಮಾತ್ರವಲ್ಲ, ಮ್ಯಾನುಪ್ಲೇಷನ್ ಬಗ್ಗೆ ಗಂಭೀರವಾಗಿ ಹೋರಾಟ ಮಾಡುವ ಸನ್ನಿವೇಶ ಇದಾಗಿದೆ ಎಂದರು.