ಮಂಡ್ಯ :- ನಾಡಿನೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಮನೆ, ಮಾಲ್, ಕಚೇರಿ ಸೇರಿದಂತೆ ಗಗನಚಯಂಬಿ ಕಟ್ಟಡಗಳೆಲ್ಲವು ಜಗಮಗಿಸುವ ಬೆಳಕಿನಿಂದ ಕಂಗೊಳಿಸುತ್ತಿವೆ. ಆದರೆ ಮಂಡ್ಯ ಜಿಲ್ಲೆಯ ಈ ಗ್ರಾಮದಲ್ಲಿ ಸುಮಾರು 200 ವರ್ಷಗಳಿಂದ ಬೆಳಕಿನ ಹಬ್ಬವಾದ ದೀಪಾವಳಿಯನ್ನ ಆಚರಿಸಿಯೇ ಇಲ್ವಂತೆ. ಬದಲಿಗೆ ಈ ದಿನವನ್ನ ಗ್ರಾಮಸ್ಥರು ಶೋಕದ ದಿನವನ್ನಾಗಿ ಆಚರಿಸುತ್ತಾರಂತೆ.
ಹೌದು, ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಈ ಪದ್ಧತಿ ಬೆಳಕಿಗೆ ಬಂದಿದೆ. ಇಲ್ಲಿನ ಅಯ್ಯಂಗಾರ್ ಸಮುದಾಯ ಸುಮಾರು 230 ವರ್ಷಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿಲ್ಲ. ಇದಕ್ಕೆ ಕಾರಣ ಮತ್ಯಾರೂ ಅಲ್ಲ ಅತ್ಯಂತ ಬಲಿಷ್ಠ ಇಸ್ಲಾಮಿಕ್ ಯೋಧ ಎಂದು ಕರೆಯಲ್ಪಡುವ ಟಿಪ್ಪು ಸುಲ್ತಾನ್.
1790ರಲ್ಲಿ ನರಕ ಚತುರ್ದಶಿ ಹಬ್ಬ ಆಚರಿಸಲು ಅಯ್ಯಂಗಾರ್ಗಳು ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿರುವ ನರಸಿಂಹ ದೇವಸ್ಥಾನದ ಆವರಣದಲ್ಲಿ ನೆರೆದಿದ್ದರು. ಈ ವಿಷಯ ತಿಳಿದ ಟಿಪ್ಪು ತನ್ನ ಹಿಂದಿನ ಸೇಡು ತೀರಿಸಿಕೊಳ್ಳಲು ಹಬ್ಬದ ದಿನವೇ ಹಿಂದೂ ಸಮುದಾಯದ ಹತ್ಯಾಕಾಂಡಕ್ಕೆ ಸೂಚನೆ ನೀಡಿದ.
ಟಿಪ್ಪುವಿನ ದ್ವೇಷದ ಜ್ವಾಲೆಗೆ ದೀಪಾವಳಿ ಹಬ್ಬದಂದೇ 700 ರಿಂದ 800 ಅಮಾಯಕ ಅಯ್ಯಂಗಾರ್ ಬ್ರಾಹ್ಮಣರು ಬಲಿಯಾದರು. ಅಂದು ಟಿಪ್ಪು ಸುಲ್ತಾನ್ ಮೇಲುಕೋಟೆಯ ಈ 800 ಮನೆಗಳ ದೀಪಗಳನ್ನು ನಂದಿಸಿದ್ದು, ಆ ಧಾರುಣ ಘಟನೆಯನೋವು ಇಂದಿಗೂ ಇಲ್ಲಿನ ಜನರ ಹೃದಯದಲ್ಲಿ ಮಾಸಿಲ್ಲ. ತಮ್ಮ ಪೂರ್ವಜರ ಸ್ಮರಣೆಯಲ್ಲಿ ಮೇಲುಕೋಟೆ ಗ್ರಾಮದ ಅಯ್ಯಂಗಾರ್ ಬ್ರಾಹ್ಮಣರೂ ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ. ಬದಲಿಗೆ ತಮ್ಮ ಪೂರ್ವಜರ ನೆನಪಿನಲ್ಲಿ ಶೋಕದ ದಿನವನ್ನಾಗಿ ಆಚರಿಸುತ್ತಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ