ಹುಬ್ಬಳ್ಳಿ: ಮಹಿಳೆಯರಲ್ಲಿ ಸ್ತ್ರೀತ್ವ ಶಕ್ತಿಗಿಂತ ಮಾತೃತ್ವ ಶಕ್ತಿ ಜಾಗೃತವಾದಾಗ ಭಾರತದ ವಿಕಾಸಕ್ಕೆ ಪೂರಕ ಎಂದು ಬೆಂಗಳೂರಿನ ಖ್ಯಾತ ನ್ಯಾಯವಾದಿ ಕ್ಷಮಾ ನರಗುಂದ ಹೇಳಿದರು.
ನಗರದ ವಾಸವಿ ಮಹಲ್ ನಲ್ಲಿ ಸಂಸ್ಕೃತಿ ಟ್ರಸ್ಟ್ ವತಿಯಿಂದ ನಡೆದ ಧಾರವಾಡ ವಿಭಾಗದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಸಮಾರೋಪದಲ್ಲಿ ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಕುರಿತು ಅವರು ಮಾತನಾಡಿದರು.
ಬೌದ್ಧಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಭಾರತ ವಿಕಾಸವಾಗಬೇಕು. ಪ್ರಾಚೀನ ಇತಿಹಾಸ ಅವಲೋಕಿಸಿದಾಗ ವಿಜ್ಞಾನ ಕ್ಷೇತ್ರದ ಏಳಿಗೆಯಲ್ಲಿ ಅನೇಕ ಮಹಿಳೆಯರ ಕೊಡುಗೆ ಅಪಾರವಾಗಿದೆ. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ ನಮ್ಮ ಶೌರ್ಯ ಪರಂಪರೆಯಲ್ಲಿ ಕಾಣುತ್ತಾರೆ ಜೊತೆಗೆ ರಾಜನೀತಿಯಲ್ಲೂ ಸಹ ಮಹಿಳೆಯರು ತಮ್ಮ ಪಾಂಡಿತ್ಯ ತೋರಿದ್ದಾರೆ ಎಂದರು.
ನಮ್ಮದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ. ಸ್ವಯಂ ವ್ಯಕ್ತಿ ನಿರ್ಮಾಣದಲ್ಲಿ ತೊಡಗಿಕೊಳ್ಳುವವರು ನಾವು. ತಥಾಕಥಿತ ಮಹಿಳಾವಾದಿಗಳು ಪುರುಷ ಸಮಾಜದಿಂದ ವಿಮುಕ್ತಿ, ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಹಾಗಾದರೆ ಯಾವ ಸಮಸ್ಯೆಯೂ ಪರಿಹಾರಗೊಳ್ಳುವುದಿಲ್ಲ. ಸ್ತ್ರೀ ಎಂಬ ಕಲ್ಪನೆ ಅತ್ಯಂತ ವಿಸ್ತಾರವಾದದ್ದು. ಸ್ತ್ರೀ-ಪುರುಷರ ತಾರತಮ್ಯ ಜಂಜಡದಲ್ಲಿ ಸಿಲುಕುವ ಬದಲು ಇಬ್ಬರೂ ಸಮಾನರು ಎಂಬ ಭಾವನೆ ಹೊಂದಬೇಕು ಏಕೆಂದರೆ ಇಬ್ಬರಲ್ಲೂ ಹಲವು ಗುಣಗಳು ಸಾಮ್ಯವಾಗಿವೆ ಎಂದರು.
ಮಾತೃತ್ವ ಶಕ್ತಿ ವಿಸ್ತಾರವಾದಾಗ ಬೌದ್ಧಿಕ ವಿಕಾಸವಾಗುತ್ತದೆ. ಬಾಹ್ಯ ವಿಕಾಸಕ್ಕಿಂತ ಆಂತರಿಕ ವಿಕಾಸ, ಆಧ್ಯಾತ್ಮ-ಸಾಂಸ್ಕೃತಿಕ ವಿಕಾಸದತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ ಮಹಾನಗರ ಸಂಯೋಜಕಿ ಭಾರತಿ ನಂದಕುಮಾರ, ಧಾರವಾಡ ವಿಭಾಗ ಸಂಯೋಜಕಿ ಶಾಂತಾ ವೆರ್ಣೇಕರ್, ರಾಧಾ ಪುರಾಣಿಕ ಮುಂತಾದವರು ಪಾಲ್ಗೊಂಡಿದ್ದರು.