ದೆಹಲಿ: ಇನ್ನುಮುಂದೆ ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ ಹಂಗಂತ ಬೆಂಗಳೂರಿನಲ್ಲಿ ಹೀಗೆ ಮಾಡೋಕೆ ಸಾಧ್ಯವಿಲ್ಲ ಯಾಕಂದ್ರೆ ಈ ರೂಲ್ಸ್ ಇರೋದು ಕರ್ನಾಟಕದಲ್ಲಿ ಅಲ್ಲ. ಆದರೆ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸೋರಿಗೆ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ದೆಹಲಿ ಹೈಕೋರ್ಟ್ ಅಭಿಪ್ರಾಯದಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿರ್ಧಾರ ಮಾಡಿದೆ. ದೆಹಲಿಯಲ್ಲಿ ತಮ್ಮ ಕಾರಿನಲ್ಲಿ ಏಕಾಂಗಿಯಾಗಿ ಚಾಲನೆ ಮಾಡುವವರು ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ರಾಜಧಾನಿಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿಳಿಸಿದೆ. ದೆಹಲಿ ಹೈಕೋರ್ಟ್ ನಿರ್ದೇಶನವನ್ನು “ಅಸಂಬದ್ಧ” ಎಂದು ಕರೆದ ಕೆಲವು ದಿನಗಳ ಬಳಿಕ ಇದೀಗ ಈ ನಿರ್ಧಾರಕ್ಕೆ ಬರಲಾಗಿದೆ.
ತನ್ನ ತಾಯಿಯೊಂದಿಗೆ ಕಾರಿನಲ್ಲಿ ಕುಳಿತು ಕಿಟಕಿಗಳನ್ನು ಮೇಲಕ್ಕೆತ್ತಿ ಕಾಫಿ ಕುಡಿಯುತ್ತಿದ್ದಾಗ ಮಾಸ್ಕ್ ಧರಿಸದ ವ್ಯಕ್ತಿಯೊಬ್ಬನಿಗೆ ದಂಡ ವಿಧಿಸಿದ ಘಟನೆ ದೆಹಲಿಯಲ್ಲಿ ನಡೆದಿತ್ತು. “ಇದು ದೆಹಲಿ ಸರ್ಕಾರದ ಆದೇಶ, ನೀವು ಅದನ್ನು ಏಕೆ ಹಿಂತೆಗೆದುಕೊಳ್ಳಬಾರದು? ಇದು ಅಸಂಬದ್ಧವಾಗಿದೆ. ನಾವು ನಮ್ಮ ಸ್ವಂತ ಕಾರಿನಲ್ಲಿ ಕುಳಿತಾಗ ನಾವು ಏಕೆ ಮಾಸ್ಕ್ ಧರಿಸಬೇಕು?” ಎಂದು ಹೈಕೋರ್ಟ್ ನ್ಯಾಯಪೀಠ ಪ್ರಶ್ನಿಸಿತ್ತು. ಈಗ ಅದೇ ಆದೇಶವನ್ನ ದೆಹಲಿಯಾದ್ಯಂತ ಜಾರಿ ಮಾಡಿ ಆದೇಶ ನೀಡಲಾಗಿದೆ.

