ಭಾರತದಲ್ಲಿ, ವಿವಾಹಿತ ಮಹಿಳೆಯನ್ನು ಗುರುತಿಸುವುದು ತುಂಬಾ ಸುಲಭ. ಮಹಿಳೆ ಹಿಂದೂ ಆಗಿದ್ದರೆ ಇದು ವಿಶೇಷವಾಗಿ ಅರ್ಥಪೂರ್ಣವಾಗಿದೆ. ಉದಾಹರಣೆಗೆ, ಹಿಂದೂ ಮಹಿಳೆಯರು, ಅವರು ವಿವಾಹಿತರು ಎಂದು ಸೂಚಿಸಲು ಕೆಂಪು ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ. ಇದು ಅವರು ವಿವಾಹಿತರು ಎಂದು ಸೂಚಿಸುವ ಸಂಕೇತವಾಗಿದೆ. ಅನೇಕ ಮಹಿಳೆಯರು ಮದುವೆಯ ನಂತರ ಕಾಲುಂಗುರವನ್ನು ಧರಿಸುತ್ತಾರೆ. ಅವುಗಳನ್ನು ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಲಾಗುತ್ತದೆ ಮತ್ತು ಇದನ್ನು ಕಾಲಿನ ಎರಡೂ ಬೆರಳುಗಳಿಗೂ ಧರಿಸಲಾಗುತ್ತದೆ.
ಮೂಲತಃ ಇದು ಭಾರತೀಯ ಸಂಸ್ಕೃತಿ. ಮದುವೆಯಾದ ಹಿಂದೂ ಮಹಿಳೆಯರು ಅಷ್ಟೇ ಅಲ್ಲ; ವಿವಾಹಿತ ಮುಸಲ್ಮಾನ ಮಹಿಳೆಯರೂ ಸಹ ಕಾಲುಂಗುರಗಳನ್ನು ಧರಿಸುತ್ತಾರೆ. ಇತರೆ ಧರ್ಮಗಳಲ್ಲೂ ಈ ಸಂಪ್ರದಾಯ ಇದೆಯಾದರೂ ಅದು ಹೆಚ್ಚಾಗಿ ಫ್ಯಾಷನ್ ಸ್ಟೇಟಸ್/ ಸಿಂಬಲ್ ಆಗಿದೆ. ಆದ್ರೆ ಜ್ಯೋತಿಷ್ಯದಲ್ಲಿ, ಕಾಲುಂಗುರಗಳನ್ನು ಧರಿಸುವುದರ ಬಗ್ಗೆ ನಿಯಮಗಳನ್ನು ಹೇಳಲಾಗಿದೆ. ಇದರ ಪ್ರಕಾರ, ಕೆಲವು ರೀತಿಯ ಉಂಗುರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಗೆಜ್ಜೆ ಇರುವ ಕಾಲುಂಗುರ :
ವಿವಾಹಿತ ಮಹಿಳೆಯರು ಡಿಸೈನರ್ ಭರಾಟೆಯಲ್ಲಿ ವಿಧ ವಿಧದ ಕಾಲುಂಗುರಗಳನ್ನೂ ಧರಿಸುತ್ತಾರೆ. ಕಾಲುಂಗುರದಲ್ಲಿ ಎಂಥ ಡಿಸೈನ್ ಇದ್ದರೂ ಪರವಾಗಿಲ್ಲ, ಆದರೆ ಅದರಲ್ಲಿ ಗೆಜ್ಜೆ ಇರಬಾರದು. ಗೆಜ್ಜೆ ಇರುವ ಕಾಲುಂಗುರದಿಂದ ಹೊರ ಬರುವ ಸದ್ದು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಕೂಡಾ ನಂಬಿಕೆ.
ಚಿನ್ನದ ಕಾಲುಂಗುರ :
ಚಿನ್ನವನ್ನು ವಿಷ್ಣುವಿನ ಅಚ್ಚುಮೆಚ್ಚಿನ ಲೋಹವೆಂದು ಪರಿಗಣಿಸಲಾಗಿದೆ. ಚಿನ್ನದ ಸಂಬಂಧ ಲಕ್ಷ್ಮೀಯೊಂದಿಗೆ ಕೂಡಾ ಇದೆ. ಹೀಗಾಗಿ ಮಹಿಳೆಯರು ತಮ್ಮ ಪಾದಗಳಿಗೆ ಚಿನ್ನದ ಉಂಗುರಗಳನ್ನು ಧರಿಸಬಾರದು. ಇದು ತಾಯಿ ಲಕ್ಷ್ಮೀ ಮತ್ತು ಭಗವಾನ್ ವಿಷ್ಣುವಿಗೆ ಮಾಡುವ ಅವಮಾನ ಎಂದು ಹೇಳಲಾಗುತ್ತದೆ.
ಹಣಕಾಸಿನ ಕೊರತೆ :
ವಿವಾಹಿತ ಮಹಿಳೆಯರು ತಮ್ಮ ಕಾಲುಂಗುರವನ್ನು ಯಾರಿಗೂ ನೀಡಬಾರದು. ಸಾಮಾನ್ಯವಾಗಿ, ಹಳೆಯ ಅಥವಾ ಒಂದಕ್ಕಿಂತ ಹೆಚ್ಚು ಕಾಲುಂಗುರ ಇದ್ದಾಗ, ಮಹಿಳೆಯರು ತಮ್ಮ ಕಾಲುಂಗುರ ಇತರರಿಗೆ ಬಳಸಾಲು ನೀಡುತ್ತಾರೆ. ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಮನೆಯಲ್ಲಿ ಕೊರತೆ ಉಂಟಾಗಿ ಸುಖ-ಸಮೃದ್ಧಿ ದೂರವಾಗುತ್ತದೆ.
ತುಂಡಾದ ಕಾಲುಂಗುರ :
ಕಾಲುಂಗುರ ಮುರಿದಿದ್ದರೆ, ಅದನ್ನು ತೆಗೆದುಬಿಡಬೇಕು. ಬಲವಂತವಾಗಿ ಧರಿಸಬಾರದು. ಮುರಿದ ಕಾಲುಂಗುರ ಗಂಡನಿಗೆ ದುರದೃಷ್ಟವನ್ನು ತರುತ್ತವೆ. ಇದು ಅವರ ವೃತ್ತಿಜೀವನದ ಮೇಲೆ ನೇರ ಪರಿಣಾಮ ಬೀರಬಹುದು.