ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ವೀಕ್ಷಕರೇ ಎಳ್ಳು ಆಯುರ್ವೆದದ ಪ್ರಕಾರ ಅತ್ಯಂತ ಗುಣಯುಕ್ತವಾದ ಪದಾರ್ಥಗಳಲ್ಲಿ ಒಂದು. ಆಯುರ್ವೆದದಲ್ಲಿ ‘ತೈಲಾನಾಂ ತಿಲತೈಲಮ್ ಎಂದು ಅಂದರೆ ಎಣ್ಣೆಗಳಲ್ಲಿ ಎಳ್ಳೆಣ್ಣೆಯು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ನಿತ್ಯವೂ ಸೇವಿಸಬಹುದಾದ ಆಹಾರ ಪದಾರ್ಥಗಳಲ್ಲಿ ಎಳ್ಳು ಕೂಡ ಒಂದು. ಇದು ವಾತ ದೋಷವನ್ನು ನಿಯಂತ್ರಣದಲ್ಲಿಟ್ಟು ದೇಹದ ಬಲವನ್ನು ಹೆಚ್ಚಿಸುತ್ತದೆ; ಮೂಳೆಯ ಆರೋಗ್ಯ ಹೆಚ್ಚಾಗುತ್ತದೆ. ಹಾಗಾಗಿ ನಮ್ಮ ಸಂಧಿಗಳ ಶಕ್ತಿಯನ್ನು ಹೆಚ್ಚಿಸುತ್ತದೆ; ಕೂದಲು ಮತ್ತು ಹಲ್ಲುಗಳ ಆರೋಗ್ಯಕ್ಕೂ ಇದು ಸಹಾಯಕ. ಇದರಿಂದ ಜೀರ್ಣಶಕ್ತಿ ಕೂಡ ಹೆಚ್ಚಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವೂ ಇರುವುದರಿಂದ ಹಲವಾರು ಕಾಯಿಲೆಗಳು ಬರದಂತೆ ತಡೆಯುತ್ತದೆ. ರಕ್ತದ ಸಂಚಾರ ಸುಲಭವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಕೊಲೆಸ್ಟರಾಲ್ ಕಡಿಮೆಯಾಗಲು ಕೂಡ ಇದು ಸಹಕಾರಿ.
ಆದ್ದರಿಂದ ಕೊಲೆಸ್ಟರಾಲ್ ಹೆಚ್ಚಿರುವವರು ಅಡುಗೆಯಲ್ಲಿ ಬೇರೆ ಎಣ್ಣೆಗಳ ಬದಲಿಗೆ ಎಳ್ಳೆಣ್ಣೆಯನ್ನು ಬಳಸಿದರೆ ಹೆಚ್ಚು ಒಳ್ಳೆಯದು. ಬಾಯಿಗೆ ಎಣ್ಣೆ ಹಾಕಿ ಮುಕ್ಕಳಿಸುವುದು ಅಂದರೆ ಆಯಿಲ್ ಪುಲ್ಲಿಂಗ್ ಮಾಡಲು ಕೂಡಾ ಎಳ್ಳೆಣ್ಣೆ ಒಳ್ಳೆಯದು. ಹಲ್ಲು ಜುಮ್ ಎನ್ನುವುದು, ವಸಡಿನ ಸಮಸ್ಯೆಗಳು, ಬೇಗ ಹಲ್ಲು ಹಾಳಾಗುವ ತೊಂದರೆಗಳು ಇದರಿಂದ ಹತೋಟಿಗೆ ಬರುತ್ತವೆ. ಇನ್ನು ಅಭ್ಯಂಗಕ್ಕೆ ಅಂದರೆ ದೇಹಕ್ಕೆ ಮಸಾಜ್ ಮಾಡಿಕೊಳ್ಳಲು ಎಳ್ಳೆಣ್ಣೆ ಅತ್ಯಂತ ಶ್ರೇಷ್ಠವಾದದ್ದು. ಏಕೆಂದರೆ ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಇದು ಅತ್ಯಂತ ವಾತನಾಶಕ. ಹಾಗಾಗಿ ಇದನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಮಂಡಿ ನೋವು, ಸೊಂಟ ನೋವು, ಚರ್ಮ ಒಡೆಯುವುದು, ಚರ್ಮ ಸುಕ್ಕು ಗಟ್ಟುವುದು ಮುಂತಾದ ತೊಂದರೆಗಳನ್ನು ತಡೆಯಬಹುದು.
ಇನ್ನೂ ಎಳ್ಳಿನ ಸೇವನೆಯಿಂದ ದೇಹದ ಬಲ, ಚರ್ಮದ ಆರೋಗ್ಯ ಕೂಡಾ ಹೆಚ್ಚಾಗುತ್ತದೆ. ಮೆದುಳಿಗೆ ಶಕ್ತಿಯನ್ನು ಕೊಟ್ಟು ಮಾನಸಿಕ ಬಲ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲ ಕಾರಣಗಳಿಂದ ಚಿಕ್ಕ ಮಕ್ಕಳಿಗೆ ರಾಸಾಯನಿಕ ಯುಕ್ತ ತಿಂಡಿ ತಿನಿಸುಗಳನ್ನು ಕೊಡುವ ಬದಲು ಎಳ್ಳುಂಡೆಯನ್ನು ತಯಾರಿಸಿ ಕೊಟ್ಟರೆ ಆರೋಗ್ಯ ವೃದ್ಧಿಯಾಗಲು ತುಂಬಾ ಸಹಾಯವಾಗುತ್ತದೆ. ಎಳ್ಳುಂಡೆಯನ್ನು ತಯಾರಿಸುವಾಗ ಎಳ್ಳಿನ ಜೊತೆ ಸಕ್ಕರೆಯನ್ನು ಬಳಸುವುದು ಬೇಡ; ಬದಲಿಗೆ ಸಾವಯವ ಬೆಲ್ಲವನ್ನು ಬಳಸಬೇಕು. ಹೀಗೆ ಎಳ್ಳು ಮತ್ತು ಬೆಲ್ಲಗಳನ್ನು ಬಳಸಿ ತಯಾರಿಸಿದ ಎಳ್ಳುಂಡೆಯನ್ನು ಕೊಡುವುದು ಮತ್ತು ಅಂಗಡಿಗಳಲ್ಲಿ ಸಿಗುವ ಚಟವನ್ನು ಹಿಡಿಸುವ ಕೆಟ್ಟ ತಿನಿಸುಗಳನ್ನು ಕೊಡದೇ ಇರುವುದು ಈ ಸಂಕ್ರಾಂತಿಯಿಂದ ಎಲ್ಲ ತಂದೆ ತಾಯಿಗಳು ತೆಗೆದುಕೊಳ್ಳಬೇಕಾದ ಶಪಥವಾಗಲಿ.