ಕರ್ನಾಟಕದ ಮೆಕ್ಕೆಜೋಳ ಕಣಜ ದಾವಣಗೆರೆ, ಬರದ ಸಿಡಿಲಿಗೆ ಬರಿದಾಗಿದೆ. ಇದರ ನೇರ ಪರಿಣಾಮ ಮೆಕ್ಕೆಜೋಳವನ್ನೇ ಅವಲಂಬಿಸಿರುವ ಉದ್ದಿಮೆಗಳ ಮೇಲಾಗಿದೆ
ಪ್ರತಿ ವರ್ಷ ಸುಮಾರು 15 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈ ಪೈಕಿ ದಾವಣಗೆರೆ ಜಿಲ್ಲೆಒಂದರಲ್ಲೇ 1.4 ಲಕ್ಷ ಹೆಕ್ಟೇರ್ ಪ್ರದೇಶವನ್ನು ಮೆಕ್ಕೆಜೋಳ ಆವರಿಸುತ್ತದೆ. ಆದರೆ, ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೇವಲ 162 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಈ ಹಿಂದೆ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿರಲಿಲ್ಲ, ಬಿತ್ತನೆ ಆದ ಬೆಳೆಯೂ ಮಳೆ ಇಲ್ಲದೆ ಒಣಗಿ ಇಳುವರಿ ಬಂದಿಲ್ಲ.
ಈ ನಡುವೆ 162 ಹೆಕ್ಟೇರ್ನಲ್ಲಿ ಬೋರ್ವೆಲ್ ನೀರು ಬಳಸಿ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ, ಬಿಸಿಲು ಅತಿಯಾಗಿರುವ ಕಾರಣ ಇಳುವರಿ ನಿರೀಕ್ಷಿಸುವಂತಿಲ್ಲ. ಜತೆಗೆ ರೋಗಗಳ ಹಾವಳಿ, ಸಾಮಾನ್ಯವಾಗಿ ಮುಂಗಾರಿನಲ್ಲಿ ಬಿತ್ತಿದ ಮೆಕ್ಕೆಜೋಳದ ಒಕ್ಕಲು ನವೆಂಬರ್, ಡಿಸೆಂಬರ್ನಲ್ಲಿ ಶುರುವಾಗಿ, ಜನವರಿ ಅಂತ್ಯದವರೆಗೂ ನಡೆಯುತ್ತದೆ.
ಸಾಮಾನ್ಯವಾಗಿ ಹಿಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ‘ಸೀಡ್ಸ್’ ತಳಿಗಳನ್ನು ಬಿತ್ತನೆಗೆ ನೀಡಿ, ಬೆಳೆ ಬಂದಾಗ ರೈತರಿಂದ ಮರಳಿ ಖರೀದಿಸಿ ಮುಂಗಾರಿಗೆ ಬಿತ್ತನೆ ಬೀಜ ತಯಾರಿಸಲಾಗುತ್ತದೆ. ಆದರೆ ಕಳೆದ ವರ್ಷ ಮಳೆಯಾಗದೆ, ಅಂತರ್ಜಲ ಕುಸಿದು ಬೋರ್ವೆಲ್ಗಳು ಬರಿದಾಗಿದ್ದು, ಸೀಡ್ಸ್ ಜೋಳ ಬೆಳೆಯಲು ಭೂಮಿ ಸಿಗುತ್ತಿಲ್ಲ. ಹೀಗಾಗಿ ಮುಂಗಾರು ಹೊತ್ತಿಗೆ ಮೆಕ್ಕೆಜೋಳ ಬಿತ್ತನೆ ಬೀಜದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬಿತ್ತನೆ ಬೀಜ ಉತ್ಪಾದಕರು.