ಧಾರವಾಡ: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿನ ಕೆಲ ಸಮಸ್ಯೆಗಳ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಇಂದು ಜಿಲ್ಲಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಆವರಣದಲ್ಲಿನ ಹದಗೆಟ್ಟ ರಸ್ತೆ, ಔಷಧಿ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆ, ಸಿಬ್ಬಂದಿ ಕೊರತೆ ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಕಂಡು ಸ್ವತಃ ನ್ಯಾಯಮೂರ್ತಿಗಳೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯ ಔಷಧ ವಿಭಾಗಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಆ ವಿಭಾಗದಲ್ಲಿ ಯಾವ ಔಷಧಿ ಎಷ್ಟು ಹೋಯಿತು ಎಷ್ಟು ಬಂತು ಎಂಬ ಮಾಹಿತಿಯೇ ಇಲ್ಲದ್ದನ್ನು ಕಂಡು ಅಸಮಾಧಾನಗೊಂಡರು. ಇನ್ನು ಆಸ್ಪತ್ರೆಯ ಆವರಣದಲ್ಲಿ ಹದಗೆಟ್ಟ ರಸ್ತೆ ಕಂಡು ಕೂಡಲೇ ರಸ್ತೆ ಸರಿ ಮಾಡಿಸುವಂತೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಖಡಕ್ ಸೂಚನೆ ನೀಡಿ, ಬಳಿಕ ನೇರವಾಗಿ ಚಿಕ್ಕ ಮಕ್ಕಳ ವಿಭಾಗ, ಐಸಿಯು ವಿಭಾಗ, ಓಪಿಡಿ, ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾ ಆಸ್ಪತ್ರೆಯಲ್ಲಿಯೇ ಸಣ್ಣ ಪುಟ್ಟ ರೋಗಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು.
ಪ್ರತಿಯೊಂದಕ್ಕೂ ಕಿಮ್ಸ್ ರವಾನೆ ಮಾಡುವುದು ಹಾಗೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡುವುದನ್ನು ಕೈಬಿಡಬೇಕು ಎಂದು ಸರ್ಜನ್ ಡಾ.ಗಾಬಿ ಅವರಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿನ ಕಾರ್ಯವೈಖರಿಯ ಕುರಿತು ಹಲವು ದೂರುಗಳು ಕೇಳಿ ಬಂದಿದ್ದವು, ಹಾಗಾಗಿ ಈಗ ಭೇಟಿ ನೀಡಿ ವಾಸ್ತವವನ್ನು ತಿಳಿದುಕೊಂಡಿದ್ದೇವೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಸರಿಪಡಿಸಿಕೊಳ್ಳಲು ಹೇಳಿದ್ದೇವೆ. ಮತ್ತೆ ಅದೇ ನಿರ್ಲಕ್ಷ್ಯ ಮುಂದುವರೆದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.