ದೊಡ್ಡಬಳ್ಳಾಪುರ: ಸಾರ್ವಜನಿಕರ ದೂರು ಆಧರಿಸಿ ದೊಡ್ಡಬಳ್ಳಾಪುರ ಸೇರಿದ ರಾಜ್ಯದ 11 ಕಡೆ ಎಡಿಎಲ್ ಆರ್ ಹಾಗೂ ಡಿಡಿಎಲ್ ಆರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಯಲಹಂಕ, ಕೆ.ಆರ್.ಪುರಂ, ದೊಡ್ಡಬಳ್ಳಾಪುರ ಸೇರಿ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ಎಡಿಎಲ್ ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಮಂದಿ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ದಾಳಿ ವೇಳೆ ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಡಿ ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು.