ನವದೆಹಲಿ: ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದ್ದು, ಉಡುಪಿ ಚಿಕ್ಕಮಗಳೂರು, ತುಮಕೂರು ಬೆನ್ನಲ್ಲೇ ದಾವಣಗೆರೆಯಲ್ಲೂ ಹಾಲಿ ಸಂಸದರಿಗೆ ಟಿಕೆಟ್ ನೀಡಲು ಆಕ್ಷೇಪ ಕೇಳಿ ಬಂದಿದೆ. ಜಿ.ಎಂ ಜಿದ್ದೇಶ್ವರ್ಗೆ ಟಿಕೆಟ್ ನೀಡದಂತೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನೇತೃತ್ವದ ನಿಯೋಗವೊಂದು ದೆಹಲಿಯಲ್ಲಿ ವರಿಷ್ಠರಿಗೆ ಮನವಿ ಮಾಡುತ್ತಿದೆ.
ಕಳೆದೊಂದು ವಾರದಿಂದ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಎಂ.ಪಿ ರೇಣುಕಾಚಾರ್ಯ ನೇತೃತ್ವದ ದಾವಣಗೆರೆಯ ವಿವಿಧ ವಿಧಾನಸಭೆಗಳ ಪರಾರ್ಜಿತ ಅಭ್ಯರ್ಥಿಗಳು ರಾಜ್ಯ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ತೀವ್ರ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ (MP Renukacharya), ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಾವುದೇ ಕಾರಣಕ್ಕೂ ಸಿದ್ದೇಶ್ವರ್ ಗೆ ಟಿಕೆಟ್ ನೀಡಬಾರದು. ಅವರು ಜನರು ಮತ್ತು ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದಾರೆ. ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ, ವಯಸ್ಸಿನ ಕಾರಣದಿಂದಲೂ ಅವರಿಗೆ ಟಿಕೆಟ್ ನೀಡಬಾರದು ಎಂದು ಹೇಳಿದರು.