ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ಇಂದು ಹಣವನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್ಗಳಲ್ಲಿರಿಸುತ್ತಾರೆ. ಮಧ್ಯಮ ಮತ್ತು ಕೆಳ ವರ್ಗದ ಜನರು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಹಂತ ಹಂತವಾಗಿ ಜಮೆ ಮಾಡುತ್ತಾರೆ. ಉಳಿತಾಯ ಖಾತೆಗಳಲ್ಲಿ ಹಣ ಜಮೆ ಮತ್ತು ಡ್ರಾ ಮಾಡೋದರ ಮೇಲೆ ಕೆಲವು ನಿಬಂಧನೆಗಳಿವೆ. ಒಂದು ವೇಳೆ ನಿಗದಿಗಿಂತ ಅಧಿಕ ಹಣ ಜಮೆ ಮಾಡಿದ್ರೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ನಿಮ್ಮ ಮನೆಗೆ ಬರುತ್ತದೆ.
ವಿಶೇಷವೆಂದರೆ ಭಾರತದಲ್ಲಿ ಉಳಿತಾಯ ಖಾತೆ ತೆರೆಯಲು ಯಾವುದೇ ಮಿತಿಯಿಲ್ಲ. ಅಂದರೆ ಒಬ್ಬ ವ್ಯಕ್ತಿಯು ಎಷ್ಟು ಉಳಿತಾಯ ಖಾತೆಗಳನ್ನು ಬೇಕಾದರೂ ತೆರೆಯಬಹುದು.
ಆದರೆ ಒಬ್ಬ ವ್ಯಕ್ತಿಯು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಠೇವಣಿ ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಹೊರತುಪಡಿಸಿ, ಇತರ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.
ಉಳಿತಾಯ ಖಾತೆಯಲ್ಲಿ ಹಣವನ್ನು ಇಡಲು ಯಾವುದೇ ಮಿತಿಯಿಲ್ಲದಿರಬಹುದು. ಆದರೆ ನೀವು ಒಂದು ಹಣಕಾಸು ವರ್ಷದಲ್ಲಿ ರೂ 10 ಲಕ್ಷಕ್ಕಿಂತ ಹೆಚ್ಚು ಠೇವಣಿ ಮಾಡಿದರೆ, ಬ್ಯಾಂಕ್ಗಳು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ ತಿಳಿಸುತ್ತವೆ. ಇದೇ ನಿಯಮವು ಎಫ್ಡಿಯಲ್ಲಿನ ನಗದು ಠೇವಣಿ, ಮ್ಯೂಚುವಲ್ ಫಂಡ್ಗಳು, ಬಾಂಡ್ಗಳು ಮತ್ತು ಷೇರುಗಳಲ್ಲಿನ ಹೂಡಿಕೆಗಳಿಗೂ ಅನ್ವಯಿಸುತ್ತದೆ.
ತೆರಿಗೆ ಮತ್ತು ಹೂಡಿಕೆ ಸಲಹೆಗಾರ ಬಲ್ವಂತ್ ಜೈನ್ ಅವರು ಭಾರತೀಯರು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಆದಾಯ ತೆರಿಗೆ ಕಾಯಿದೆ ಅಥವಾ ಬ್ಯಾಂಕಿಂಗ್ ನಿಯಮಗಳಲ್ಲಿ ಯಾವುದೇ ಮಿತಿ ಇಲ್ಲ. ಆದರೆ ಬ್ಯಾಂಕ್ ಖಾತೆದಾರರು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಇರಿಸಲಾದ ಮೊತ್ತದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTA ಪ್ರಕಾರ, ಎಲ್ಲಾ ವ್ಯಕ್ತಿಗಳು 10,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 10 ಸಾವಿರಕ್ಕಿಂತ ಕಡಿಮೆ ಬಡ್ಡಿ ಬಂದರೆ ತೆರಿಗೆ ಕಟ್ಟಬೇಕಾಗಿಲ್ಲ. ಅದೇ ರೀತಿ 60 ವರ್ಷ ಮೇಲ್ಪಟ್ಟ ಖಾತೆದಾರರು 50 ಸಾವಿರ ರೂ.ವರೆಗಿನ ಬಡ್ಡಿಗೆ ತೆರಿಗೆ ಪಾವತಿಸಬೇಕಾಗಿಲ್ಲ.
ಖಾತೆದಾರರು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಉಳಿತಾಯ ಖಾತೆಯಲ್ಲಿ ಠೇವಣಿ ಇಟ್ಟರೆ, ಆದಾಯ ತೆರಿಗೆ ಇಲಾಖೆಯು ಹಣದ ಮೂಲದ ಬಗ್ಗೆ ಕೇಳಬಹುದು. ಖಾತೆದಾರರ ಪ್ರತಿಕ್ರಿಯೆಯಿಂದ ತೃಪ್ತರಾಗದಿದ್ದರೆ, ತನಿಖೆ ಮಾಡಬಹುದು. ತನಿಖೆಯ ಸಮಯದಲ್ಲಿ ಹಣದ ಮೂಲವು ತಪ್ಪು ಎಂದು ಕಂಡುಬಂದರೆ, ಆದಾಯ ತೆರಿಗೆ ಇಲಾಖೆಯು ಠೇವಣಿ ಮಾಡಿದ ಮೊತ್ತದ ಮೇಲೆ 60% ತೆರಿಗೆ, 25% ಹೆಚ್ಚುವರಿ ಶುಲ್ಕ ಮತ್ತು 4% ಸೆಸ್ ಅನ್ನು ವಿಧಿಸುವ ಸಾಧ್ಯತೆ ಇದೆ.