ಕಾಡಿನ ರಾಜ ಸಿಂಹದ ಆಹಾರ ಕ್ರಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇತರ ಪ್ರಾಣಿಗಳನ್ನು ಬೇಟೆಯಾಡಿ ಸಿಂಹಗಳು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ, ಸಿಂಹಗಳು ಮಾಂಸ ಮಾತ್ರವಲ್ಲದೆ ಹುಲ್ಲು, ಎಲೆಗಳನ್ನೂ ತಿನ್ನುತ್ತವೆ ಎಂಬುದು ನಿಮಗೆ ಗೊತ್ತಾ…? ಇಲ್ಲಿದೆ ನೋಡಿ!
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಇಂತಹದ್ದೊಂದು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಸಿಂಹವೊಂದು ಕುರಿ, ಮೇಕೆಯಂತೆಯೇ ಎಲೆಗಳನ್ನು ತಿನ್ನುವುದನ್ನು ನೋಡಬಹುದು. 44 ಸೆಕೆಂಡುಗಳ ಕ್ಲಿಪ್ ಇದು. ಸಿಂಹ ಹೀಗೆ ಎಲೆಗಳನ್ನು ತಿನ್ನುವಾಗ ಸಹಜವಾಗಿಯೇ ಕುತೂಹಲ ಮೂಡುತ್ತದೆ. ಏನಿದರ ಕಾರಣ ಎಂಬ ಪ್ರಶ್ನೆಗಳೂ ಮೂಡುತ್ತವೆ. ಸಾಕಷ್ಟು ನೆಟ್ಟಿಗರು ಈ ಬಗ್ಗೆ ಕುತೂಹಲದ ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೂ ಸುಸಂತ ನಂದ ಅವರು ಉತ್ತರ ನೀಡಿದ್ದಾರೆ. ‘ಹೌದು, ಇದು ನಿಮಗೆ ಆಘಾತಕಾರಿಯಾಗಿರಬಹುದು. ಆದರೆ ಸಿಂಹಗಳು ಹುಲ್ಲು ಮತ್ತು ಎಲೆಗಳನ್ನು ತಿನ್ನಲು ಹಲವು ಕಾರಣಗಳಿವೆ. ಇದು ಅವುಗಳ ಹೊಟ್ಟೆ ನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ನೀರನ್ನು ಕೂಡಾ ಪೂರೈಸುತ್ತದೆ’ ಎಂದು ಸುಸಂತ ನಂದ ಕ್ಯಾಪ್ಶನ್ನಲ್ಲಿ ಉಲ್ಲೇಖಿಸಿದ್ದಾರೆ.

