ಚಿತ್ರದುರ್ಗ:- ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಕೆಲವು ವಿಚಾರದಲ್ಲಿ ಒಂದೇ ಅಂಶ ಒಳಗೊಂಡಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಚಿತ್ರದುರ್ಗದ ತಾರಾಸು ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾಗಿದ್ದ ಕುರಾನ್ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಮತ್ತು ಇಸ್ಲಾಂಗಳಲ್ಲಿ ಕೆಲವು ಒಂದೇ ರೀತಿಯ ಅಂಶಗಳಿವೆ. ಉಭಯ ಧರ್ಮಗಳಲ್ಲಿ ಸಾಮ್ಯತೆಗಳಿವೆ ಎಂದರು.
ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಬೇರೆ ಬೇರೆಯಾಗಿದ್ದರೂ ಕೆಲವು ಒಂದೇ ರೀತಿಯ ಅಂಶಗಳನ್ನು ಹೊಂದಿವೆ ಎಂದಿದ್ದಾರೆ.
ಲಿಂಗಾಯತ ಧರ್ಮ ಬಹು ದೇವರುಗಳ ಆರಾಧನೆ ಮತ್ತು ಮೂರ್ತಿ ಪೂಜೆಯನ್ನು ನಿರಾಕರಿಸುತ್ತದೆ. ಆದರೆ ಅದು ಇಷ್ಟಲಿಂಗ ಪೂಜೆಯನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಕೂಡ ಮೂರ್ತಿ ಪೂಜೆ ಬೇಡವೆಂಬ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಿಗ್ರಹಗಳನ್ನು ಪೂಜಿಸಬೇಡಿ, ಅಲ್ಲಾಗೆ ಮಾತ್ರ ನಡೆದುಕೊಳ್ಳಿ ಎಂದು ಮುಸ್ಲಿಮರನ್ನು ಪೈಗಂಬರ್ ಕೇಳಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಒಬ್ಬನೇ ದೇವರ ಹಲವು ಹೆಸರುಗಳ ಸಿದ್ಧಾಂತವನ್ನು ಅನೇಕರು ಪ್ರಚಾರ ಮಾಡಿದ್ದಾರೆ. ದೇವರು ಒಬ್ಬನೇ. ಆದರೆ ಜನರು ಇನ್ನೂ ತಮ್ಮ ನಡುವೆ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ತಮ್ಮ ಸುತ್ತಲೂ ಬೇಲಿಗಳನ್ನು ರಚಿಸುತ್ತಿದ್ದಾರೆ. ಹಾಗಾಗಿ ವಿಚಾರವಾದಿಗಳು ಇಂತಹ ಗೋಡೆ, ತಡೆಗೋಡೆಗಳನ್ನು ಕೆಡವಿ ಪರಸ್ಪರ ಪ್ರೀತಿಸುವ ಹವ್ಯಾಸ ಬೆಳೆಸಿಕೊಳ್ಳುವಂತೆ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.