ಬೆಳಗಾವಿ:- ಸರ್ಕಾರಕ್ಕೆ ಗ್ಯಾರಂಟಿ ಜಾರಿಗಿರುವ ಆಸಕ್ತಿ ರೈತರ ಮೇಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರವು ಧಾವಿಸಬೇಕಾದ ಅಗತ್ಯವಿದ್ದು, ಎರಡು ಲಕ್ಷ ರು.ವರೆಗಿನ ಕೃಷಿ ಸಾಲಮನ್ನಾ ಮಾಡುವುದರ ಜತೆಗೆ ತಕ್ಷಣ 10 ಸಾವಿರ ಕೋಟಿ ರು. ಅನುದಾನವನ್ನು ಒದಗಿಸಬೇಕು ಎಂದರು
ಸರ್ಕಾರಕ್ಕೆ ಪ್ರಚಾರದ ಮೇಲೆ ಇರುವ ಆಸಕ್ತಿ ರೈತರ ಬಗ್ಗೆ ಇಲ್ಲ.
ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಅಸಡ್ಡೆತನ ಆಶ್ಚರ್ಯವನ್ನುಂಟು ಮಾಡಿದೆ. ಕಳೆದ ಆರು ತಿಂಗಳಿನಿಂದ ಕೇವಲ ಗ್ಯಾರಂಟಿಗಳ ಬಗ್ಗೆಯೇ ಕೆಲಸ ಮಾಡುತ್ತಿರುವ ಈ ಸರ್ಕಾರ, ಆರ್ಥಿಕ ಹೊರೆಯನ್ನು ತನ್ನ ಮೇಲೆ ಎಳೆದುಕೊಂಡು ರೈತರಿಗೆ ಪ್ರತಿಯೊಂದಕ್ಕೂ ಬರೆ ಎಳೆಯುತ್ತಿದೆ. ಬೆಳೆ ನಾಶದಿಂದ ಅತೀವ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಸಾಲಮನ್ನಾ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಗ್ಯಾರಂಟಿಗಳ ಅನುಷ್ಠಾನಗೊಳಿಸುವ ಭರದಲ್ಲಿ ಉಳಿದ ಕಾರ್ಯಗಳ ಕಡೆಗಣನೆ ಮಾಡಲಾಗಿದೆ. ಗ್ಯಾರಂಟಿ ಜಾರಿಗೆ ಹೆಚ್ಚು ಸಮಯ ಕೊಟ್ಟು ಆರ್ಥಿಕ ಹೊರೆ ಅವರೇ ತಂದು ಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಪಿಡಿಓ ಖಾತೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 800 ಕೋಟಿ ರು. ಮೀಸಲಿಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಬರಪೀಡಿತ 216 ತಾಲೂಕುಗಳ ನಷ್ಟದ ಬಗ್ಗೆ ಮಾಹಿತಿ ನೀಡಿದೆ. ರಾಜ್ಯ ಸರ್ಕಾರ ನೀಡಿರುವ ಅಂದಾಜಿನ ಪ್ರಕಾರ ರೈತರು ಅನುಭವಿಸಿರುವ ಬೆಳೆ ನಷ್ಟದ ಶೇ.10ರಷ್ಟು ಬೆಳೆ ನಷ್ಟಕ್ಕೂ ಪರಿಹಾರ ಕೊಡಲಾಗುವುದಿಲ್ಲ. ಹೀಗಾಗಿ ರೈತರು ಸರ್ಕಾರದಿಂದ ನೆರವು ಬಯಸುತ್ತಿದ್ದಾರೆ ಎಂದರು.