ನವದೆಹಲಿ: ಅತ್ತಿಗೆ ಜೊತೆ ಜಗಳವಾಗಿದ್ದು, ಈ ವೇಳೆ ಅವಳ ಕತ್ತು ಹಿಸುಕಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಈಶಾನ್ಯ ದೆಹಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕರವಲ್ ನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರವಲ್ ನಗರದ ನಿವಾಸಿ ರೋಹಿತ್(26) ಡಿಸಿಪಿ ಕಚೇರಿಗೆ ಬಂದಿದ್ದು, ಅತ್ತಿಗೆಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಅತ್ತಿಗೆಯ ದೇಹವನ್ನು ಮನೆಯಲ್ಲಿ ಬಿಟ್ಟು ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕರವಲ್ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಇತರ ಸಿಬ್ಬಂದಿಯೊಂದಿಗೆ ಕರವಲ್ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು,
ಮಹಿಳೆ ದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಡಿಸಿಪಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ. ನನ್ನ ತಾಯಿಯನ್ನು ಬಿಟ್ಟು ನನ್ನೊಂದಿಗೆ ಇರು ಎಂದು ಅತ್ತಿಗೆ ಹೇಳುತ್ತಿದ್ದಳು. ಇದಕ್ಕಾಗಿ ಯಾವಾಗಲೂ ಜಗಳವಾಗುತ್ತಿತ್ತು. ನನ್ನ ಅಣ್ಣ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ. ಆಗಿನಿಂದ ಅತ್ತಿಗೆ ನನ್ನೊಂದಿಗಿದ್ದಳು ಎಂದು ವಿಚಾರಣೆ ವೇಳೆ ರೋಹಿತ್ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಸಹ ಜಗಳ ನಡೆದಿದ್ದು, ಈ ವೇಳೆ ರೋಹಿತ್ ಅತ್ತಿಗೆಯ ಕುತ್ತಿಗೆಯನ್ನೇ ಹಿಸುಕಿ ಕೊಲೆ ಮಾಡಿದ್ದಾನೆ.

ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕರವಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ಸಹ ನಡೆಸಲಾಗಿದೆ. ಮಹಿಳೆಗೆ ಒಬ್ಬ ಮಗ, ಒಬ್ಬಳು ಮಗಳಿದ್ದು, ಮಗ ಚಿಕ್ಕಪ್ಪನ ಮನೆಗೆ ಹೋಗಿದದ್ದಾನೆ. ಮಗಳು ಆಟವಾಡಲು ಹೊರಗೆ ಹೋಗಿದ್ದಾಳೆ. ಈ ವೇಲೆ ಕೊಲೆ ನಡೆದಿದೆ. ರೋಹಿತ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.