ಭಾರತ ಬೌಲಿಂಗ್ ಪಡೆ ಯಾವ ತಂಡಕ್ಕೂ ಕಮ್ಮಿ ಇಲ್ಲ ಎಂಬುದನ್ನು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಸಾಬೀತು ಮಾಡಿದೆ. ಮೊಹಮದ್ ಸಿರಾಜ್ ಮಾಡಿದ ಮಾರಕ ಬೌಲಿಂಗ್ನಿಂದಾಗಿ ಲಂಕಾ ತಂಡ ಫೈನಲ್ ಪಂದ್ಯದಲ್ಲಿ ನೆಲಕಚ್ಚಿದೆ. ಸಿರಾಜ್ ಪಂದ್ಯದ ಪ್ರಮುಖ 6 ವಿಕೆಟ್ ಕಬಳಿಸಿದರೆ, ಉಪನಾಯಕ ಹಾರ್ದಿಕ್ ಮೂರು ವಿಕೆಟ್ ಪಡೆದರು. ಬುಮ್ರಾ 1 ವಿಕೆಟ್ ಉರುಳಿಸಿದರು. ಇದರಿಂದ ಲಂಕಾ ಕೇವಲ 50 ರನ್ಗೆ ಸರ್ವ ಪತನ ಕಂಡಿದೆ.
ಲಂಕಾ ಪರ ಕುಸಾಲ್ ಮೆಂಡಿಸ್ 17 ಮತ್ತು ತೀಕ್ಷ್ಣ ಬದಲಾಗಿ ತಂಡಕ್ಕೆ ಸೇರಿದ್ದ ದುಶನ್ ಹೇಮಂತ 13 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು ಆಡಲಿಲ್ಲ. 5 ಬ್ಯಾಟರ್ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ತಂಡಕ್ಕೆ ನಿರಾಸೆ ಮೂಡಿಸಿದರು.

ಮೊದಲ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ಕುಸಲ್ ಪೆರೆರಾ ವಿಕೆಟ್ ಪಡೆದರು. ನಂತರ ನಾಲ್ಕನೇ ಓವರ್ನಲ್ಲಿ 1, 3, 4 ಮತ್ತು 6ನೇ ಬಾಲ್ನಲ್ಲಿ ಸಿರಾಜ್ ಪಾತುಮ್ ನಿಸ್ಸಾಂಕ (2), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0) ಮತ್ತು ಧನಂಜಯ ಡಿ ಸಿಲ್ವಾ (4) ಅವರ ವಿಕೆಟ್ ಕಬಳಿಸಿದರು. ಮತ್ತೆ ಆರನೇ ಓವರ್ ಮಾಡಲು ಬಂದ ಸಿರಾಜ್ ಶ್ರೀಲಂಕಾ ನಾಯಕ ದಸುನ್ ಶನಕ (0) ಅವರನ್ನು ಪೆವಿಲಿಯನ್ಗೆ ಕಳಿಸಿದರು. ಇದಾದ ನಂತರ 11ನೇ ಓವರ್ ಮಾಡಿದ ಸಿರಾಜ್ ಅನುಭವಿ ಕುಸಲ್ ಮೆಂಡಿಸ್ ವಿಕೆಟ್ ಪಡೆದರು.
ನಂತರ ಹಾರ್ದಿಕ್ ಪಾಂಡ್ಯ 13 ಮತ್ತು 16ನೇ ಓವರ್ನಲ್ಲಿ ಮೂರು ವಿಕೆಟ್ ಪಡೆದರು. 12.3 ಓವರ್ನಲ್ಲಿ ದುನಿತ್ ವೆಲ್ಲಲಾಗೆ 8 ರನ್ಗೆ ಓಟ್ ಆದರು. 15.1 ಮತ್ತು 15.2 ಬಾಲ್ನಲ್ಲಿ ಬಾಲಂಗೋಚಿಗಳಾದ ಪ್ರಮೋದ್ ಮದುಶನ್, ಮತೀಶ ಪತಿರಾನ ವಿಕೆಟ್ ಕೊಟ್ಟರು. ಇದರಿಂದ 50 ರನ್ ಗಳಿಸಿದ ಲಂಕಾ ತನ್ನೆಲ್ಲಾ ವಿಕೆಟ್ನ್ನು ಕಳೆದುಕೊಂಡಿತು.
