ಕವಿತಾಳ:- ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಮೂಲಸೌಕರ್ಯದ ಕೊರತೆ.
ಇಲ್ಲಿ ಅಕ್ಷರ ಕಲಿತ ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ. ಸುವರ್ಣ ಮಹೋತ್ಸವದ ಸಂಭ್ರಮದ ಶಾಲೆಯಲ್ಲಿ ಪ್ರತಿ ವರ್ಷ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದು ಸ್ಥಳೀಯರು ಮತ್ತು ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.
10ರಿಂದ 12 ವರ್ಷಗಳ ಹಿಂದೆ ಅಂದಾಜು 500ಕ್ಕೂ ಹೆಚ್ಚಿನ ಮಕ್ಕಳ ದಾಖಲಾತಿ ಮತ್ತು 16 ಜನ ಕಾಯಂ ಶಿಕ್ಷಕರಿದ್ದ ಈ ಶಾಲೆಯಲ್ಲಿ ಸದ್ಯ 146 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕ ಮತ್ತು ಇಬ್ಬರು ಕಾಯಂ ಶಿಕ್ಷಕರಿದ್ದಾರೆ. ಮೂವರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. 8ನೇ ತರಗತಿಗೆ ಮಕ್ಕಳು ಪ್ರವೇಶ ಪಡೆಯದ ಕಾರಣ ಉನ್ನತೀಕರಿಸಿದ ಶಾಲೆಯಿಂದ ಈಗ ಹಿರಿಯ ಪ್ರಾಥಮಿಕ ಶಾಲೆಯಾಗಿ ಹಿನ್ನಡೆ ಕಂಡಿದೆ.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಗ್ರಾಮೀಣ ಸೌಲಭ್ಯ ಸಿಗದಿರುವುದು ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.