ಧಾರವಾಡ: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ಮಾಡಿರುವ ಆದೇಶವನ್ನು ಹಿಂಪಡೆಯಲು ಆಗ್ರಹಿಸಿ, ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಕಾರ್ಮಿಕ ಸಮಸ್ಯೆ ನಿವಾರಣೆಗೆ ಮಾಡಬೇಕು, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯ ಧನವನ್ನು ಕಳೆದ 2 ವರ್ಷಗಳಿಂದ ನೀಡಿಲ್ಲ, ಧನ ಸಹಾಯ ಕಡಿಮೆ ಮಾಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಶಾಲಾ ಖರ್ಚುಗಳು ಏರುಗತಿಯಲ್ಲಿರುವ ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ಮಂಡಳಿಯ ಈ ನಿರ್ಧಾರ ಕಾರ್ಮಿಕರ ಹಕ್ಕನ್ನು ಕಿತ್ತುಕೊಂಡಂತೆ. ಆದ್ದರಿಂದ ಕೂಡಲೇ ಈ ಆದೇಶ ಹಿಂಪಡೆಯಬೇಕು, ಎಂದು ಸರ್ಕಾರವನ್ನು ಅಗ್ರಹಿಸಿದರು.