ಕೋಲಾರ : ರೈತರಿಗೆ ಭೂಮಿ ಮಂಜೂರಾತಿಗೆ ಸಲ್ಲಿಸಿದ ಅರ್ಜಿಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡಿ ಪರಿಹಾರ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ಜಿಲ್ಲೆಯ ರೈತರು ಶ್ರಮಜೀವಿಗಳು, ಜಿಲ್ಲೆಯಲ್ಲಿ ಮಳೆಯು ಪ್ರತಿ ವರ್ಷ ಕಡಿಮೆಯಾಗುತ್ತಿದೆ ಅಲ್ಪಸ್ವಲ್ಪವಾಗಿಯೇ ಸಿಗುವ ಅಂತರ್ಜಲವನ್ನು ಬಳಸಿಕೊಂಡು ಕೃಷಿ ಮಾಡಿ ಜೀವನ ನಡೆಸುವ ಸಂದರ್ಭ ಬಂದಿದೆ ರೈತರು ಕೃಷಿ ಮಾಡುತ್ತಿರುವ ಸರ್ಕಾರಿ ಗೋಮಾಳವನ್ನು ಉಳುವವನೇ ಭೂಮಿ ಒಡೆಯ ಯೋಜನೆಯಲ್ಲಿ ಜಿಲ್ಲೆಯ ಸಾವಿರಾರು ರೈತರಿಗೆ ಭೂಮಿ ಮಂಜೂರು ಮಾಡಲಾಗಿದೆ
ರೈತರು ಇನ್ನಷ್ಟು ಭೂಮಿ ಮಂಜೂರು ಮಾಡಲು ಸಾವಿರಾರು ಅರ್ಜಿಗಳನ್ನು ಹಾಕಿದ್ದಾರೆ ಸರ್ಕಾರ ಭೂಮಿ ಮಂಜೂರಾತಿ ಸಮಿತಿಗಳನ್ನು ಆಯ್ಕೆ ಮಾಡಿದ್ದರೂ ಸಹ ರೈತರ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ವಜಾ ಮಾಡಲಾಗುತ್ತಿದೆ. ಯಾವ ಕಾರಣದಿಂದ ವಜಾ ಮಾಡಲಾಗುತ್ತಿದೆ ಇದಕ್ಕೆ ನಿರ್ದಿಷ್ಟವಾದ ಕಾರಣಗಳು ಪರಿಹಾರವನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು.