ಬಾಗಲಕೋಟೆ: ಸಂತೆ ಮೇಳ ಮಕ್ಕಳಲ್ಲಿ ಮಾರುಕಟ್ಟೆ ಜ್ಞಾನ, ಹಣಕಾಸು ಜ್ಞಾನ, ವ್ಯವಹಾರ ಜ್ಞಾನ ಬೆಳೆಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ ಅಭಿಪ್ರಾಯ ಪಟ್ಟರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಶ್ರೀ ಸಿದ್ಧಾರೂಢ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಮೇಳ ಕಾರ್ಯಕ್ರಮ ನಡೆಯಿತು.
ಕಲಿಕೆ ಯಶಸ್ವಿಯಾಗಲು ಚಟುವಟಿಕೆಗಳು ಪೂರಕ. ಸಂತಸಮಯ ಕಲಿಕೆಯಿಂದ ಕೌಶಲ್ಯ, ಜ್ಞಾನ ಬೆಳೆದು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸವಾಗಲು ಸಹಕಾರಿಯಾಗಿದೆ. ಇಂಥ ಚಟುವಟಿಕೆಗಳನ್ನು ಮತ್ತಷ್ಟು ಕೈಗೊಳ್ಳುವ ಮೂಲಕ ಮಕ್ಕಳ ಪ್ರಗತಿಗೆ ಶಿಕ್ಷಕರು ನಿರಂತರ ಪ್ರಯತ್ನ ಮಾಡಬೇಕು ಎಂದು ಕರೆ ಕೊಟ್ಟರು.
ಪರಮಾನಂದ ಸ್ವಾಮೀಜಿ ಮಾತನಾಡಿ ಬರೀ ಪುಸ್ತಕೀಯ ಜ್ಞಾನ ಬೆಳೆಸಿ ಪುಸ್ತಕದ ಬದನೆಕಾಯಿ ಮಾಡುವುದು ಬೇಡ. ಇಂದಿನ ಮಕ್ಕಳು ಬಹಳ ಕ್ರಿಯಾಶೀಲರು, ಸೃಜನಶೀಲರು. ಜಗತ್ತಿನ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ದಗೊಳಿಸಬೇಕು ಎಂದರು. ಮಕ್ಕಳು ವಿವಿಧ ಬಗೆಯ ತರಕಾರಿ, ಹಣ್ಣು,, ತೆಂಗಿನಕಾಯಿ, ತಿನುಸುಗಳು, ಪಾನಿಪುರಿ, ಬಜ್ಜಿ, ಬಡಂಗ, ಮಿಸಳ, ಮಜ್ಜಿಗೆ ಇತ್ಯಾದಿ ಮಾರುತಿದ್ದದ್ದು ಆಕರ್ಷಕವಾಗಿತ್ತು. ಮಕ್ಕಳು ಗ್ರಾಹಕರನ್ನು ಕೂಗಿ ಕೂಗಿ ಕರೆಯುತ್ತಿದ್ದದ್ದು ವಿಶೇಷವಾಗಿತ್ತು.
ಪಾಲಕರು, ವಿವಿಧ ಶಾಲೆ ಶಿಕ್ಷಕರು, ಸಾರ್ವಜನಿಕರು ಮಕ್ಕಳಿಂದ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಪರಶುರಾಮ ಗುಟ್ಲಿ, ಸುರೇಶ ಗಾಯಕವಾಡ, ಜೋತೆಪ್ಪ ನಲ್ಲೂಡಿ, ಶಿಕ್ಷಕರಾದ ಶಿವಾನಂದ, ಮಮತಾ ಬುರ್ಲಿ, ಸರೋಜಿನಿ ಗಿರಿಸಾಗರ, ಲಕ್ಷ್ಮಿ ಸಿಂಧೆ, ಸುಜಾತಾ ಹಳ್ಳೂರ, ನೀತಾ , ಗಾಯತ್ರಿ, ಪದ್ಮಾಕುಂಬಾರ, ಯಶೋದಾ, ಶೈಲ ಬುರ್ಲಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ