ಪಾಟ್ನಾ: ಬಿಹಾರದಲ್ಲಿ (Bihar) ಶಿಕ್ಷಕನೊಬ್ಬನನ್ನು (Teacher) ಅಪಹರಿಸಿ, ಗನ್ ತೋರಿಸಿ ಬೆದರಿಸಿ ತನ್ನ ಮಗಳೊಂದಿಗೆ ಕಿಡ್ನ್ಯಾಪರ್ ಮದುವೆ (Mariiage) ಮಾಡಿಸಿರುವ ಘಟನೆಯೊಂದು ನಡೆದಿದೆ. ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಟೇಪುರ್ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕ ಗೌತಮ್ ಕುಮಾರ್ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ.
ಗೌತಮ್ ಕುಮಾರ್ ಎಂದಿನಂತೆ ಶಾಲೆಗೆ ಹೋಗಿದ್ದಾಗ ಅಲ್ಲಿಗೆ ಬಂದ 3-4 ಜನರು ಆತನನ್ನು ಅಪಹರಿಸಿದ್ದಾರೆ. ಆತನಿಗೆ ಬಂದೂಕು ತೋರಿಸಿ, ಬೆದರಿಸಿ, ಅಪಹರಣವಾದ ಕೇವಲ 24 ಗಂಟೆಯಲ್ಲಿ ಕಿಡ್ನ್ಯಾಪರ್ನ ಮಗಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಗಮನಾರ್ಹ ವಿಚಾರವೆಂದರೆ ಈ ರೀತಿ ಯುವಕರನ್ನು ಅಪಹರಣ ಮಾಡಿ ಮದುವೆ ಮಾಡುವುದು ಬಿಹಾರದಲ್ಲಿ ಸಾಮಾನ್ಯವಾಗಿದೆ. ಇದನ್ನು ‘ಪಕಡ್ವಾ ವಿವಾಹ’ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಒಳ್ಳೆಯ ಹುದ್ದೆಗೇರಿದ ಯುವಕರನ್ನು ಈ ರೀತಿ ಅಪಹರಣ ಮಾಡಿ ತಮ್ಮ ಮಕ್ಕಳೊಂದಿಗೆ ಮದುವೆ ಮಾಡಿಸುತ್ತಾರೆ. ಆದರೆ ಮದುವೆ ಬಗ್ಗೆ ಯೋಚನೆಯೇ ಮಾಡಿರದ ಗೌತಮ್ ಕುಮಾರ್ ಈಗ ಅನಿರೀಕ್ಷಿತವಾಗಿ ಪಕಡ್ವಾ ವಿವಾಹಕ್ಕೆ ಒಳಗಾಗಿದ್ದಾನೆ.
ಇತ್ತ ಗೌತಮ್ ಕುಮಾರ್ ಅಪಹರಣವಾಗುತ್ತಿದ್ದಂತೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ರಾತ್ರಿ ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಕಾಣೆಯಾಗಿದ್ದ ಶಿಕ್ಷಕನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಮಾಡಿದ್ದಾರೆ. ಕುಮಾರ್ನ ಕುಟುಂಬ ರಾಜೇಶ್ ರೈ ಎಂಬ ವ್ಯಕ್ತಿಯ ಮೇಲೆ ಅಪಹರಣದ ಆರೋಪ ಹೊರಿಸಿದೆ. ರಾಜೇಶ್ ರೈ ಕುಟುಂಬ ಕುಮಾರ್ನನ್ನು ಬಲವಂತವಾಗಿ ಕರೆದೊಯ್ದು ತಮ್ಮ ಮಗಳು ಚಾಂದಿನಿಯೊಂದಿಗೆ ಮದುವೆ ಮಾಡಿದ್ದಾಗಿ ಆರೋಪಿಸಿದ್ದಾರೆ. ಈ ಹಿಂದೆ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕುಮಾರ್ಗೆ ದೈಹಿಕ ಹಿಂಸೆ ನೀಡಿದ್ದಾಗಿಯೂ ತಿಳಿಸಿದ್ದಾರೆ.