ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸುದೀಪ್ ಆಪ್ತ ಸ್ನೇಹಿತ ಹಾಗೂ ನಿರ್ಮಾಪಕ ಜಾಕ್ ಮಂಜು ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸುದೀಪ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಚಕ್ರವರ್ತಿ ಚಂದ್ರಚೂಡ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ನಿರ್ದೇಶಕ ಕಂ ನಟ ನಾಗಶೇಖರ್ ಬಣ್ಣ ಹಚ್ಚುತ್ತಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾಗೆ ಪಾದರಾಯ ಎಂಬ ಟೈಟಲ್ ಇಡಲಾಗಿದೆ. ಕಾಂತಾರ ನಂತರ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪಾದರಾಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ತಮಿಳನ ಖ್ಯಾತ ಸಂಕಲನಕಾರ ಆಂಟೋನಿ ಮುಂತಾದ ಖ್ಯಾತನಾಮರು ಕಾರ್ಯ ನಿರ್ವಹಿಸುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷ.

ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದರೆ, ಖ್ಯಾತ ನಿರ್ದೇಶಕ ಹಾಗೂ ನಟ ನಾಗಶೇಖರ್ ನಾಯಕ ನಟನಾಗುವ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ದೇಶ ವ್ಯಾಪಿ ಸುದ್ದಿ ಮಾಡಿದ ನೈಜ ಘಟನೆಯೊಂದರ ಆಧಾರಿತ ಈ ಸಿನಿಮಾ ಹಲವು ಜೀವಂತ ಘಟ್ಟಗಳಿಂದ ಕೂಡಿದ್ದು, ಹಾಗಾಗಿ ಹನುಮ ಜಯಂತಿಯಂದೇ ಶೀರ್ಷಿಕೆ ಬಿಡುಗಡೆ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಜನವರಿಯಿಂದ ಚಿತ್ರೀಕರಣ ಆರಂಭಿಸಲಿದೆ.
