ಬೆಂಗಳೂರು:- ಇತ್ತೀಚೆಗೆ ದಂಪತಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣವಿದ್ದ ಬ್ಯಾಗ್ ಎಗರಿಸಿದ್ದ ಪ್ರಕರಣ ಸಂಬಂಧ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ನ ಸದಸ್ಯನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಿರಿ ಕುಮಾರ್ ಅಲಿಯಾಸ್ ಗಿರಿ(41) ಬಂಧಿತ ಆರೋಪಿ. ಆರೋಪಿಯಿಂದ ₹25 ಲಕ್ಷ ಮೌಲ್ಯದ 449 ಗ್ರಾಂ ಚಿನ್ನ ಮತ್ತು ವಜ್ರಾಭರಣ ಜಪ್ತಿ ಮಾಡಲಾಗಿದೆ. ಅ.21ರಂದು ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್ಮೆಂಟ್ ಬಳಿ ರಾಜೇಶ್ ಶ್ರೀವಾಸ್ತವ್ ಅವರು ತಮ್ಮ ಪತ್ನಿ ಜತೆಗೆ ಕಾರಿನಲ್ಲಿ ಹೋಗುವಾಗ ಕೆಲ ದುಷ್ಕರ್ಮಿಗಳು ಕಾರು ಪಂಕ್ಚರ್ ಆಗಿದೆ ಎಂದು ದಂಪತಿಯ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ರಾಜೇಶ್ ದಂಪತಿ ಕೆಂಗೇರಿಯ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ಕೆಲ ತಿಂಗಳ ಹಿಂದೆ ಚಂದ್ರಾಲೇಔಟ್ನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಲಾಕರ್ನಲ್ಲಿ ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ಇರಿಸಿದ್ದರು. ಅ.21ರಂದು ರಾಜೇಶ್ ದಂಪತಿ ಬ್ಯಾಂಕ್ ತೆರಳಿ ಲಾಕರ್ನಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಕಾರಿನಲ್ಲಿ ಇರಿಸಿಕೊಂಡು ಮನೆ ಕಡೆಗೆ ಹೊರಟ್ಟಿದ್ದಾರೆ.
ಈ ನಡುವೆ ಬ್ಯಾಂಕ್ ಬಳಿ ಕುಳಿತು ರಾಜೇಶ್ ದಂಪತಿ ಚಲನವಲನ ಗಮನಿಸಿರುವ ದುಷ್ಕರ್ಮಿಗಳು, ಕಾರಿನ ಹಿಂಬದಿ ಚಕ್ರ ಪಂಕ್ಚರ್ ಮಾಡಿದ್ದಾರೆ. ಕಾರು ಪಂಕ್ಚರ್ ಆಗಿರುವುದನ್ನು ಗಮನಿಸದ ದಂಪತಿ ಮನೆ ಕಡೆಗೆ ಹೊರಟ್ಟಿದ್ದಾರೆ. ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್ಮೆಂಟ್ ಬಳಿ ನಿಧಾನಗತಿಯಲ್ಲಿ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಫಾಲೋ ಮಾಡಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು, ಕಾರಿನ ಟೈಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ರಾಜೇಶ್ ಕಾರು ಪಕ್ಕಕ್ಕೆ ಹಾಕಿ ನೋಡಿದಾಗ ಟೈಯರ್ ಪಂಕ್ಚರ್ ಆಗಿರುವುದು ಕಂಡು ಬಂದಿದೆ.
ಈ ವೇಳೆ ಮತ್ತಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಸಮೀಪದಲ್ಲೇ ಪಂಕ್ಚರ್ ಅಂಗಡಿ ಇದೆ ಎಂದು ದಂಪತಿ ಗಮನ ಬೇರೆಡೆ ಸೆಳೆದಿದ್ದಾರೆ. ಈ ವೇಳೆ ಕಾರಿನಿಂದ ದಂಪತಿ ಕೆಳಗೆ ಇಳಿದು ಪಂಕ್ಚರ್ ಅಂಗಡಿ ಕಡೆಗೆ ನೋಡುವಾಗ, ಇನ್ನಿಬ್ಬರು ದ್ವಿಚಕ್ರ ವಾಹನದಲ್ಲಿ ಕಾರಿನ ಬಾಗಿಲು ತೆರೆದು ಚಿನ್ನಾಭರಣವಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಅಷ್ಟರಲ್ಲಿ ಉಳಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪಂಕ್ಚರ್ ಅಂಗಡಿ ಬಳಿಗೆ ಕಾರು ತೆಗೆದುಕೊಂಡು ಹೋಗಲು ರಾಜೇಶ್ ದಂಪತಿ ಕಾರಿನೊಳಗೆ ಕೂರಲು ನೋಡಿದಾಗ ಆಸನದ ಮೇಲೆ ಇಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗ್ ನಾಪತ್ತೆ ಆಗಿರುವುದು ಕಂಡು ಬಂದಿದೆ. ಬಳಿಕ ಕೆಂಗೇರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.