ಧಾರವಾಡ: ಕಿಯೋನಿಕ್ಸ್ ಎಂಡಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದು, ಯಾರೇ ತಪ್ಪು ಮಾಡಿದರು ತನಿಖೆಯಾಗಿ ಆಗಬೇಕು ಎಂದು ಹೇಳಿದ್ದಾರೆ. ನಗರದ ಸಪ್ತಾಪುರ ಬಡವಾಣೆಯ ಮೆಟ್ರಿಕ್ ನಂತರ ಸರಕಾರಿ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅವರು ಕಮೀಷನ್ ಕೇಳಿರುವ ವಿಚಾರ ನನಗೆ ಗೊತ್ತಿಲ್ಲ.
ಈ ಬಗ್ಗೆ ಗುತ್ತಿಗೆದಾರರು ದೂರು ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಯಾರೇ ಆದರೂ ಕ್ರಮ ಆಗಬೇಕು ಎಂದರು. ಇನ್ನೂ ಧಾರವಾಡದ ಹಾಸ್ಟೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧಾರವಾಡದ ಹಾಸ್ಟೆಲ್ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 450 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ನಲ್ಲಿ ಅವಕಾಶವಿದೆ. ಆದರೆ, ಇಲ್ಲಿ 600 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇನ್ನೊಂದಿಷ್ಟು ಕೊಠಡಿಗಳನ್ನು ಮಾಡಬೇಕಿದೆ.
ಕೊಠಡಿಗಳು ಆದಾಗ ಸಮಸ್ಯೆ ಬಗೆಹರಿಯುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕಾಂಶದ ಆಹಾರ ಕೊಡಬೇಕು. ಇಲ್ಲಿ ಊಟ ಸರಿಯಾಗಿ ಕೊಡುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಮಲಗುತ್ತಿರುವ ಮಾತುಗಳು ಕೇಳಿ ಬರುತ್ತಿವೆ. ಕೆಲವರು ಗ್ರಂಥಾಲಯದಲ್ಲಿ ಹೆಚ್ಚು ಓದುತ್ತಿದ್ದಾರೆ. ಹೀಗಾಗಿ ಅಲ್ಲಿಯೂ ಅವರು ಇರಬಹುದು. ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.