ತುಮಕೂರು: ಬಾವಿಗೆ ಜಿಗಿದು ಎರಡು ವರ್ಷದ ಪುಟ್ಟ ತಂಗಿಯನ್ನ ಕಾಪಾಡಿದ್ದ ಪೋರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಲಭಿಸಿದೆ. ಹೌದು ತನ್ನ ಎರಡು ವರ್ಷದ ತಂಗಿಯನ್ನ ಕಾಪಾಡಲು ಜೀವ ಪಣಕ್ಕಿಟ್ಟು ಬಾವಿಗೆ ಜಿಗಿದು ತಂಗಿಯನ್ನ ಕಾಪಾಡಿದ್ದ ಶಾಲು ಎಂಬ 8 ವರ್ಷದ ಬಾಲಕಿ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆಯಾಗಿದ್ದಾಳೆ.
ತುಮಕೂರು ತಾಲೂಕಿನ ಕುಚಂಗಿ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಾಲುಗೆ ಅಧಿಕೃತ ಅಹ್ವಾನ ನೀಡಲಾಗಿದೆ. ಆಟ ಆಡುವ ವೇಳೆ ಬಾವಿಗೆ ಬಿದ್ದಿದ್ದ ಶಾಲುವಿನ ತಂಗಿ ಎರಡು ವರ್ಷದ ಪುಟ್ಟ ಕಂದಮ್ಮನನ್ನು ಲೈಫ್ ಜಾಕೆಟ್ ತೊಟ್ಟು ಬಾವಿಗೆ ಜಿಗಿದು ಕಾಪಾಡಿದ್ದಾಳೆ.
ಕಳೆದ ಜೂನ್ ನಲ್ಲಿ ಈ ಘಟನೆ ನಡೆದಿದ್ದು, ಶಾಲು ಶೌರ್ಯ ಮೆಚ್ಚಿ ಸರ್ಕಾರ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡುತ್ತಿದೆ. ನಾಳೆ ಬೆಂಗಳೂರು ಜವಹಾರ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.