ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಕೆಆರ್ಎಸ್ (KRS) ಅಣೆಕಟ್ಟೆ ಭರ್ತಿಯಾಗಿದೆ. ಇತ್ತ ತಮಿಳುನಾಡಿಗೆ (Tamil Nadu) ಕೊಡಬೇಕಾದ ಕೋಟಾದ ನೀರನ್ನು ಕೂಡ ಕೊಟ್ಟಾಗಿದೆ. ಜೊತೆಗೆ ಈಗಲೂ ಸಹ ತಮಿಳುನಾಡಿಗೆ ನೀರು ಹೋಗುತ್ತಿದೆ. ಯಾವುದೇ ತೊಂದರೆ ಇಲ್ಲದೇ ಬೆಳೆ ಬೆಳೆಯಬಹುದು ಎಂದು ಕನಸು ಕಟ್ಟಿಕೊಂಡಿದ್ದ ರೈತರಿಗೆ ಮತ್ತೆ ಕಾವೇರಿ ಶಾಕ್ ಎದುರಾಗಿದೆ.
ತುಂಗಭದ್ರಾ ನದಿ ಸಂಪೂರ್ಣ ಭರ್ತಿ: ಕಬ್ಬು, ಸೂರ್ಯಕಾಂತಿ ಸೇರಿದಂತೆ ಸರ್ವಬೆಳೆಗಳು ಆಹುತಿ
ಕಳೆದ 20 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಇದರಿಂದ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿದೆ. ಜೊತೆಗೆ ಕೆಆರ್ಎಸ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ಕಾವೇರಿ ಮೈದುಂಬಿ ಹರಿದು ತಮಿಳುನಾಡಿನ ಮೆಟ್ಟೂರು ಡ್ಯಾಂನ ಒಡಲು ಸೇರಿದ್ದಾಳೆ. ಹೀಗಿರುವಾಗ ಕೆಆರ್ಎಸ್ ಡ್ಯಾಂನ ನಂಬಿರುವ ಕಾರಣ ಕಳೆದ ವರ್ಷ ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತರು (Farmers) ಈ ಬಾರಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಬೆಳೆ ಬೆಳೆಯಬಹುದು ಎಂಬ ಸಂತಸದಲ್ಲಿದ್ದರು. ಆದರೆ ಆ ಖುಷಿಗೆ ಸರ್ಕಾರ ಬ್ರೇಕ್ ಹಾಕಿದೆ.
ಕಳೆದ ವರ್ಷ ಸರಿಯಾದ ಪ್ರಮಾಣದ ಮಳೆ ಬೀಳದ ಕಾರಣ ಕಾವೇರಿ ಕೊಳ್ಳದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕನ್ನಂಬಾಡಿ ಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಹೀಗಾಗಿ ರೈತರು ಉತ್ತಮ ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಸರ್ಕಾರ ಕೆಆರ್ಎಸ್ ಡ್ಯಾಂನಿಂದ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಬಿಡುವ ತೀರ್ಮಾನಕ್ಕೆ ಬಂದಿದೆ. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆಗಸ್ಟ್ 8 ರಿಂದ ಪದ್ಧತಿಯಂತೆ ನೀರು ಹರಿಸಲು ತೀರ್ಮಾನ ಮಾಡಲಿದೆ. ನಾಲ್ಕು ತಿಂಗಳ ಕಾಲ ತಿಂಗಳಲ್ಲಿ 18 ದಿನಗಳು ಮಾತ್ರ ನೀರು ಹರಿಸಲಾಗುತ್ತಿದೆ ಎಂದು ಕಾವೇರಿ ನಿಗಮ ಆದೇಶ ಹೊರಡಿಸಿದೆ.