ಚಿತ್ರದುರ್ಗ: ದುಡಿದ ಹಣವನ್ನು ಮನೆ ಖರ್ಚಿಗೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ದೂರು ನೀಡಿ ಪರಾರಿಯಾದ ವ್ಯಕ್ತಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. ಭರಮಸಾಗರದ ಕೋಣನೂರು ಗ್ರಾಮದ ನಾರಪ್ಪ ಎಂಬ ವ್ಯಕ್ತಿ ಕಳೆದ ತಿಂಗಳು 25 ನೇ ತಾರೀಖಿನಂದು ರಾತ್ರಿ ಹೆಂಡತಿ ಸುಮಾಳ ಜೊತೆ ಜಗಳವಾಡಿ 26ನೇ ತಾರೀಖಿನಂದು ಬೆಳಗಿನ ಜಾವ 5:00 ಗಂಟೆಗೆ ಮನೆಯಲ್ಲಿದ್ದ ಒನಕೆಯಿಂದ ಹೆಂಡತಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಲ್ಲದೇ ತಾನೇ ಭರಮಸಾಗರ ಪೊಲೀಸ್ ಠಾಣೆಗೆ ಹೋಗಿ ನನ್ನ ಹೆಂಡತಿ 25 ನೇ ತಾರೀಖು 9:30 ಸಮಯದಲ್ಲಿ ಹೊರ ಹೋದವಳು ಮನೆಗೆ ವಾಪಸ್ ಬಂದಿಲ್ಲ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಪರಾರಿಯಾಗಿದ್ದ.
ವಿಷಯ ತಿಳಿದು ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಕೊಲೆಯಾದ ಮಹಿಳೆಯ ಸುಮಾಳ ತಂದೆ ಕೋಣನೂರ ಗ್ರಾಮಕ್ಕೆ ಬಂದು ವಿಚಾರಿಸಿ, ಮನೆಯ ಬಳಿ ನೋಡಿದಾಗ ಮನೆಯಲ್ಲಿ ಕೆಟ್ಟವಾಸನೆ ಬಂದಿದೆ. ಅಲ್ಲದೆ, ಮನೆಯಲ್ಲಿ ಜೆಲ್ಲಿ, ಮರಳು, ಸಿಮೆಂಟ್ ಮಿಕ್ಸ್ ಮಾಡಿದ ಕಾಂಕ್ರೀಟ್ ಬಿದ್ದಿರುವುದು ಸಹ ಕಂಡುಬಂದಿದೆ.

ಇದರಿಂದಾಗಿ ಅನುಮಾನಗೊಂಡ ಮೃತ ಸುಮಾಳ ತಂದೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಎಸ್.ಪಿ ರಾಧಿಕಾ ಹಾಗೂ ಡಿವೈಎಸ್ ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ, ಸರ್ಕಲ್ ಇನ್ಸ್ಪೆಕ್ಟರ್ ಮಧು, ಪಿಎಸ್ಐ ರಾಜು ಅವರ ಪೊಲೀಸ್ ಸಿಬ್ಬಂದಿ ತಂಡ ಕೋಣನೂರು ಗ್ರಾಮದ ನಾರಪ್ಪ ಮನೆಯನ್ನು ಪರಿಶೀಲನೆ ನಡೆಸಿದಾಗ ನೆಲದಲ್ಲಿ ಹೂತು ಹಾಕಿರುವ ಮೃತದೇಹ ಕಂಡು ಬಂದಿದೆ.
ನಂತರ, ಪತಿ ನಾರಪ್ಪನಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಶನಿವಾರ 8 ನೇ ತಾರೀಖಿನಂದು ಆರೋಪಿ ನಾರಪ್ಪನನ್ನು ಬಂದಿಸಿ, ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆರೋಪಿ ನಾರಪ್ಪ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ. ನಾನು ಪ್ರಾವಿಜನ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದು, ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಹಾಗೂ ಇಸ್ಪೀಟ್ ಜೂಜಿಗೆ ಕಳೆಯುತ್ತಿದ್ದೆ, ಇದರಿಂದ ನನ್ನ ಹೆಂಡತಿಗೂ ನನಗೂ ಪ್ರತಿದಿನ ಜಗಳವಾಗುತ್ತಿತ್ತು. ಈ ಕಾರಣಕ್ಕೆ ನನ್ನ ಹೆಂಡತಿಯನ್ನು ಒನಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ನಂತರ, ಮನೆಯಲ್ಲೇ ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಆರೋಪಿ ನಾರಪ್ಪ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಭರಮಸಾಗರ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ.