ಚಾಮರಾಜನಗರ.:- ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಸ್ತೂರು ದೊಡ್ಡಮ್ಮತಾಯಿ ಬಂಡಿಜಾತ್ರೆ ಈ ವರ್ಷವೂ ಸಹ ಕೊರೊನಾ ಹಾಗೂ ಅದರ ಜೊತೆಗೆ ಓಮಿಕ್ರಾನ್‌ನ ಕರಿನೆರಳು ವಕ್ಕರಿಸಿದ್ದು, ಈ ಬಾರಿಯೂ ಸಹ ಸಡಗರದ ಹಬ್ಬ ಆಚರಣೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ತಾಲೂಕಿನ ಕುದೇರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ಕಸ್ತೂರು ಬಂಡಿ ಜಾತ್ರೆ ಆಚರಣೆ ಕುರಿತು ಸಭೆ ನಡೆಸಲಾಯಿತು.
ಸಭೆಯಲ್ಲಿ ತಹಶಿಲ್ದಾರ್ ಚಿದಾನಂದ ಗುರುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಸೋಂಕು ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಈಗಾಗಲೇ ವಾರಾಂತ್ಯ ಕರ್ಫ್ಯೂ ಮಾಡಿದ್ದು, ಹಬ್ಬ ಆಚರಣೆಗಳನ್ನು ಸಹ ಆಚರಣೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಈ ಬಾರಿ ಕಸ್ತೂರು ಬಂಡಿ ಜಾತ್ರೆಯನ್ನು ಸುತ್ತಮುತ್ತಲಿನ ೧೬ ಗ್ರಾಮಗಳ ಜನರು ತಮ್ಮ ತಮ್ಮ ಮನೆಯಲ್ಲೇ ಆಚರಿಸಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಬಂಡಿ ಕಟ್ಟಿ ಪೂಜೆ ಸಲ್ಲಿಸಬಾರದು. ದೇವಸ್ಥಾನಕ್ಕೂ ಸಹ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಹಾಗಾಗಿ ಭಕ್ತಾದಿಗಳು ಸಹ ದೇವಸ್ಥಾನಕ್ಕೆ ಬರುವಂತಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ಹಬ್ಬ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸುವಂತೆ ತಿಳಿಸಿದರು.ಈ ಸಭೆಯಲ್ಲಿ ಡಿವೈಎಸ್ಪಿ ಪ್ರಿಯದರ್ಶಿನಿ ಈ ಸಾಣಿಕೊಪ್ಪ, ಸಬ್‌ಇನ್ಸ್‌ಪೆಕ್ಟರ್ ಹನುಮಂತ ಉಪ್ಪಾರ, ವಿವಿಧ ಗ್ರಾಮಗಳ ಮುಖಂಡರು, ಯಜಮಾನರು ಭಾಗವಹಿಸಿದ್ದರು.
ಜಾತ್ರೆಯ ನಿಷೇಧದಿಂದಾಗಿ ಕಸ್ತೂರು, ಮರಿಯಾಲ, ಮರಿಯಾಲದ ಹುಂಡಿ, ಕೆಲ್ಲಂಬಳ್ಳಿ, ಭೋಗಾಪುರ, ಕಿರಗಸೂರು, ದಾಸನೂರು, ಸಪ್ಪಯ್ಯನಪುರ, ಹನಹಳ್ಳಿ, ಮೂಕಹಳ್ಳಿ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ಅಂಕುಶರಾಯನಪುರ, ತೊರವಳ್ಳಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನಹುಂಡಿ, ಬಸವನಪುರ ಸೇರಿದಂತೆ 23 ಗ್ರಾಮಗಳಲ್ಲೂ ಮನೆ ಮಾಡಿದ್ದ ಕಸ್ತೂರು ಬಂಡಿ ಜಾತ್ರೆಗೆ ಈ ವರ್ಷ ಓಮಿಕ್ರಾನ್‌ನ ಕರಿಛಾಯೆ ವ್ಯಾಪಿಸಿದೆ.