ಚಾಮರಾಜನಗರ:– ತಾಲೂಕಿನ ಕಿಲಗೆರೆ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಮೊದಲ ಕಾರ್ತೀಕ ಸೋಮವಾರದ ಅಂಗವಾಗಿ ೧೦೧ ದೀಪಗಳನ್ನು ಹಚ್ಚುವ ಮೂಲಕ ಸಡಗರದಿಂದ ಮೊದಲ ಕಾರ್ತೀಕ ಮಹೋತ್ಸವವನ್ನು ಆಚರಿಸಲಾಯಿತು.
ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮ ದೇವರುಗಳಿಗೆ ತಮಟೆ, ಜಾಗಟೆ ಸದ್ದಿನೊಂದಿಗೆ ಪೂಜೆ ಸಲ್ಲಿಸಿ, ನಂತರ ಬಸವನಿಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ದಪ್ಪಾಜಿ, ಮಂಟೇಸ್ವಾಮಿ ಕಂಡಾಯಗಳನ್ನು ಸತ್ತಿಗೆ, ಸೂರಪಾನಿ, ಛತ್ರಿ ಚಾಮರಗಳೊಂದಿಗೆ ದೇವಸ್ಥಾನದ ಸುತ್ತ ಮೂರು ಸುತ್ತು ಬರಲಾಯಿತು.
ತದನಂತರ ದೇವಸ್ಥಾನದ ಮುಂದೆ ಜೋಡಿಸಿದ್ದ ೧೦೧ ದೀಪಗಳನ್ನು ಹಚ್ಚುವ ಮೂಲಕ ಮೊದಲ ಕಾರ್ತೀಕ ಮಹೋತ್ಸವವನ್ನು ಆಚರಿಸಿದರು.
ಈ ವೇಳೆ ಗ್ರಾಮದ ಜನತೆ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.