ಚಿಕ್ಕಮಗಳೂರು:- ಕರ್ನಾಟಕ ಪೊಲೀಸ್ ಇಡೀ ದೇಶಕ್ಕೆ ಮಾದರಿ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪೊಲೀಸ್ ಸರ್ಕಾರದ ಒಂದು ಮುಖ, ಪೊಲೀಸರು ಚೆನ್ನಾಗಿದ್ದರೆ, ರಾಜ್ಯದ ಸುರಕ್ಷತೆ, ಕಾನೂನು ವ್ಯವಸ್ಥೆ ಚೆನ್ನಾಗಿದ್ದರೆ, ಆ ರಾಜ್ಯ ಅಭಿವೃದ್ಧಿ ದಾರಿಯಲ್ಲಿ ಸಾಗುತ್ತಿದೆ ಎಂದರ್ಥ. ಇಡೀ ದೇಶಕ್ಕೆ ಕರ್ನಾಟಕ ಪೊಲೀಸ್ ಮಾದರಿ ಎಂದರು
ಪೊಲೀಸರಿಗೆ ಏನೆಲ್ಲಾ ಸವಲತ್ತು ಬೇಕೋ ಅದನ್ನು ಮಾಡಿಕೊಡುವುದು ಸರ್ಕಾರದ ಜವಬ್ದಾರಿ ಎಂದರು.
ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ಪೊಲೀಸರು ವಾಸವಾಗುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪೊಲೀಸ್ ಗೃಹ ಕಾರ್ಯಕ್ರಮ ಜಾರಿಗೆ ತರಲಾಗಿತ್ತು. ಅದರಡಿಯಲ್ಲಿ ಸುಮಾರು 47 ಸಾವಿರ ಮನೆ ಈಗಾಗಲೇ ರಾಜ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಯೋಜನೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಎಲ್ಲಾ ಪೊಲೀಸರಿಗೆ ಮನೆಗಳನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು. ಈ ಯೋಜನೆಯಡಿ ಸವಲತ್ತು ಪಡೆದಿರುವ ಪೊಲೀಸರ ಸಂಖ್ಯೆ ಶೇ. 45 ರಷ್ಟಿದೆ. ಇದು, ಶೇ. 100 ಕ್ಕೆ ಬರಬೇಕು. ಹಾಗಾಗಿ ಕೇಳಿದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು 3 ಸಾವಿರ ಕೋಟಿ ರುಪಾಯಿ ಕೊಟ್ಟಿದ್ದರು.
ಈಗಲೂ ಕೂಡ ಪೊಲೀಸ್ ಗೃಹ ನಿರ್ಮಾಣ ಕ್ಕೆ ಇನ್ನು 2 ಸಾವಿರ ಕೋಟಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಇತ್ತೀಚೆಗೆ 400 ಕೋಟಿ ರು. ಬಿಡುಗಡೆಯಾಗಿದೆ ಎಂದು ಹೇಳಿದರು. ಪೊಲೀಸ್ ವಸತಿ ಯೋಜನೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ಅದು, ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ. ಹಾಗಾಗಿ ಮೊದಲ ಆದ್ಯತೆಯನ್ನು ಗ್ರಾಮೀಣ ಪ್ರದೇಶಕ್ಕೆ ನೀಡಲಾಗುವುದು ಎಂದರು. ಪೊಲೀಸ್ ಠಾಣೆಗಳನ್ನು ಆಧುನೀಕರಣ ಮಾಡಲಾಗುತ್ತಿದೆ. ಠಾಣೆಗೆ ಹೋದರೆ ನಮ್ಮನ್ನು ಅಪರಾಧಿಯಂತೆ ಕಾಣುತ್ತಾರೆಂಬ ಭಾವನೆ ಜನರಿಂದ ಹೋಗಬೇಕು. ಪೊಲೀಸರು ಜನಸ್ನೇಹಿಯಾಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.