ಬೆಳಗಾವಿ: ಕಂಡಕ್ಟರ್ ಮೇಲೆ ಹಲ್ಲೆ, ಕನ್ನಡ ಮರಾಠಿ ಭಾಷಾ ಗಲಾಟೆಯಿಂದ ಬಂದ್ ಆಗಿದ್ದ ಕರ್ನಾಟಕ ಮಹಾರಾಷ್ಟ್ರ ಬಸ್ ಸಂಚಾರ ಇದೀಗ ಆರಂಭಗೊಂಡಿದೆ. ಕರ್ನಾಟಕದಲ್ಲಿ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಭಾರೀ ಹೋರಾಟ ನಡೆದಿದ್ದವು. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರಿಂದ ಕರ್ನಾಟಕ ಬಸ್ ಗೆ ಚಾಲಕನಿಗೆ ಮಸಿ ಬಳಿದು ಗೂಂಡಾಗಿರಿ ಪ್ರದರ್ಶಿಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಕರ್ನಾಟಕ ಬಸ್ ಚಾಲಕನಿಂದ ಜೈ ಮಹಾರಾಷ್ಟ್ರ ಘೋಷಣೆ ಹಾಕಿಸಿದ್ದರು.
ಇದಕ್ಕೆ ಬೆಳಗಾವಿ ಚಲೋ ಮೂಲಕ ಕರವೇ ಕಾರ್ಯಕರ್ತರು ತಕ್ಕ ಉತ್ತರ ಕೊಟ್ಟಿದ್ದರು. ಹೀಗಾಗಿ ಗಡಿಯಲ್ಲಿ ಒಂದು ರೀತಿ ಉದ್ವಿಘ್ನ ವಾತಾವರಣ ಇದ್ದ ಕಾರಣ ಫೆ.23 ರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ಎರಡು ರಾಜ್ಯದ ಮಧ್ಯೆ ಹಂತ ಹಂತವಾಗಿ ಬಸ್ ಸಂಚಾರ ಆರಂಭಗೊಂಡಿದೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಪ್ರತಿಭಟನೆ ; ಕೊಲ್ಲಾಪುರ ಬಸ್ ಸಂಚಾರ ಸ್ಥಗಿತ
ನಾಲ್ಕು ದಿನ ಬಸ್ ಇಲ್ಲದಕ್ಕೆ ಎರಡು ರಾಜ್ಯದಲ್ಲಿ ಪ್ರಯಾಣಿಕರು ಪರದಾಡಿದ್ದರು. ನಾಲ್ಕು ದಿನದಲ್ಲಿ ಕರ್ನಾಟಕ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸಿದೆ. ಬೆಳಗಾವಿ ಡಿಸಿ ಮತ್ತು ಕೊಲ್ಲಾಪುರ ಡಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಸ್ ಆರಂಭಿಸಲು ಮಾತುಕತೆ ನಡೆಸಿದ್ದು, ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯದಲ್ಲಿ ಬಸ್ ಚಾಲಕರ, ನಿರ್ವಾಹಕರು ಮತ್ತು ಪ್ರಯಾಣಿಕರ ಸುರಕ್ಷತೆಗೆ ಒತ್ತುಕೊಡುವುದಾಗಿ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯ ಬೆಳಗಾವಿಯಿಂದ ಕೊಲ್ಲಾಪುರ, ಪುಣೆ, ಮುಂಬೈ, ಶಿರಡಿ, ನಾಸಿಕ್, ಇಚ್ಚಲಕಾರಂಜಿ ಬಸ್ ಸೇವೆ ಆರಂಭಗೊಂಡಿದೆ.