ಬೆಂಗಳೂರು: ಕೈಗಾರಿಕೆ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂಬ ವಿಧೇಯಕ ಜಾರಿಗೆ ತಂದರೆ ಅದನ್ನು ಪ್ರಶ್ನಿಸಲು ಎಂಇಎಸ್ ನವರು ಯಾರು? ಕನ್ನಡದ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಮೂಲಕ ಎಂಇಎಸ್ ನಡೆಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುವ ವಿಧೇಯಕ ವಿಧಾನಮಂಡಲದಲ್ಲಿ ಅಂಗೀಕರವಾದ ಹಿನ್ನೆಲೆ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಅವರ ನೇತೃತ್ವದಲ್ಲಿ ಎಂಇಎಸ್ ಕಾರ್ಯಕರ್ತರು ಸಭೆ ನಡೆಸಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ವಿಧಾನಸೌಧದಲ್ಲಿ ಸಚಿವರು ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿಗರೇ ಗಮನಿಸಿ… ಇನ್ನೂ 2 ದಿನ ಕುಡಿಯುವ ನೀರಿಲ್ಲ, ನಿಮ್ಮ ಏರಿಯಾನೂ ಇದೆಯಾ?
ನಮ್ಮ ರಾಜ್ಯ ನಾವು ಕಾಯ್ದೆ ರೂಪಿಸುತ್ತೇವೆ. ಮಹಾರಾಷ್ಟ್ರದಲ್ಲಿ ಏನಾದರೂ ನಾಮಫಲಕದಲ್ಲಿ ಕನ್ನಡ ಹಾಕಿ ಎಂದು ಹೇಳಿದ್ದೇವೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧೇಯಕವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದೆ ತರುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ಬಗ್ಗೆ ನಾವು ಚಿಂತನೆ ಮಾಡುತ್ತೇವೆ. ಬೆಳಗಾವಿ ಜಿಲ್ಲೆ ರಾಜ್ಯದ ಅವಿಭಾಜ್ಯ ಅಂಗ. ಈ ನೆಲದ ಶಾಸನವನ್ನು ಪ್ರಶ್ನೆ ಮಾಡಲು ಮಹಾರಾಷ್ಟ್ರ ದವರು ಯಾರು? ಈ ಬಗ್ಗೆ ಪ್ರಶ್ನೆ ಅಲ್ಲ, ಕೇಳಲು ಕೂಡ ‘ಮಹಾರಾಷ್ಟ್ರ ಕ್ಕೆ ಅಧಿಕಾರ ಇಲ್ಲ. ಯಾರು ಎಲ್ಲಿಗೆ ಹೋದರೂ ನಾಮಫಲಕ ಅಳವಡಿಕೆ ಕೆಲಸವನ್ನು ಮಾಡುವುದು ನಿಶ್ಚಿತ ಎಂದು ಹೇಳಿದರು.
ಕನ್ನಡಿಗರ ಶಾಂತಿ ಪ್ರಿಯರು. ಕನ್ನಡದ ವಿಚಾರಕ್ಕೆ ಬಂದಾಗ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಸಚಿವ ತಂಗಡಗಿ ಎಚ್ಚರಿಕೆ ನೀಡಿದರು.
ಇಲ್ಲಿ ಗಡಿ ಜಿಲ್ಲೆ, ಮಧ್ಯ ಕರ್ನಾಟಕ ಎಂಬ ಮಾತಿಲ್ಲ. ಇಡೀ ರಾಜ್ಯಾದ್ಯಂತ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಬಳಕೆ ಆಗಬೇಕು ಎಂದು ತಿಳಿಸಿದರು.
ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡು ಮನೆಯಲ್ಲೂ ಪಕ್ಷತೀತವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಒಪ್ಪಿಗೆ ದೊರೆತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಕನ್ನಡದ ವಿಚಾರದಲ್ಲಿ ಬೇರೆ ಯಾರದ್ದೋ ಮಾತನ್ನು ಕೇಳುವ ಮಾತಿಲ್ಲ. ಭಾಷೆ, ನೆಲ, ಜಲದ ವಿಚಾರದಲ್ಲಿ ಯಾವುದೇ ರಾಜೀ ಪ್ರಶ್ನೆಯೇ ಇಲ್ಲ ಎಂದು ಶಿವರಾಜ್ ತಂಗಡಗಿ ಖಡಕ್ ಆಗಿ ಉತ್ತರಿಸಿದರು.