ಧಾರವಾಡ: ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಪ್ರವಾಸದಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಇಂದು ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಧಾರವಾಡದ ಜಿಲ್ಲಾ ಆಸ್ಪತ್ರೆ, ವಿವಿಧ ಹಾಸ್ಟೆಲ್ ಸೇರಿದಂತೆ ಅವಳಿನಗರದ ಅನೇಕ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳು, ಇಂದು ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಿಗಳ ಸಭೆ ನಡೆಸುವುದರ ಜೊತೆಗೆ ಸಾರ್ವಜನಿಕರ ಅಹವಾಲು ಆಲಿಸಿದರು.
ಸಭೆಯಲ್ಲಿ ನ್ಯಾಯಮೂರ್ತಿಗಳು ಮುಖ್ಯವಾಗಿ ಸ್ವಚ್ಛತೆಯ ಬಗ್ಗೆಯೇ ಪಾಠ ಮಾಡಿದ್ದು ವಿಶೇಷವಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ನಾವು ಬಯಲು ಶೌಚಾಲಯ ಪದ್ಧತಿಯನ್ನು ತೆಗೆದು ಹಾಕಬೇಕಿದೆ. ಜನರ ಮನಸ್ಥಿತಿ ಬದಲಾಗಬೇಕಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮಾಡಿದರೂ ಇನ್ನೂ ಬಯಲು ಬಹಿರ್ದೆಸೆಗೆ ಹೋಗುವ ಪದ್ಧತಿ ಹೋಗಿಲ್ಲ. ಇಂತವರಿಗೆ ಕಾನೂನು ಪ್ರಕಾರವೇ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಅಧಿಕಾರಿಗಳಿಗೂ ಸಹ ಜನರ ಮನಸ್ಥಿತಿ ಬದಲಿಸಲು ಆಗುತ್ತಿಲ್ಲ. ಜನರಂತೆಯೇ ಅಧಿಕಾರಿಗಳು ಸಹ ಆಗಿದ್ದಾರೆ. ಇದು ಹೀಗೇ ಮುಂದುವರೆದರೆ ನೂರು ವರ್ಷವಾದರೂ ನಾವು ಹೀಗೇ ಇರಬೇಕಾಗುತ್ತದೆ. ಸ್ವಚ್ಛತೆಯಿಂದ ನಾವು ದೂರ ಉಳಿಯುತ್ತಿದ್ದೇವೆ ಎಂದು ಮಾರ್ಮಿಕವಾಗಿ ಸಭೆಯಲ್ಲಿ ಅಧಿಕಾರಿಗಳಿಗೆ ಪಾಠ ಮಾಡಿದರು. ಇನ್ನು ಸಭೆಯಲ್ಲಿ ವಿವಿಧ ಕೆರೆಗಳ ಕಾಮಗಾರಿ, ಸ್ಮಶಾನ ಭೂಮಿ, ರಸ್ತೆ, ಬ್ರಿಜ್ ಸೇರಿದಂತೆ ಇತ್ಯಾದಿ ಸಮಸ್ಯೆಗಳ ಕುರಿತು ಲೋಕಾಯುಕ್ತ ಕಚೇರಿಯಲ್ಲಿ ದಾಖಲಾದ ದೂರುಗಳನ್ನು ಪರಿಶೀಲಿಸಿ ಅವುಗಳನ್ನು ಕಾನೂನಿನ ಚೌಕಟ್ಟಿನಡಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ, ಧಾರವಾಡ ಆಡಳಿತದಲ್ಲಿ ಆದರ್ಶ ಜಿಲ್ಲೆಯನ್ನಾಗಿ ಮಾಡಲು ಸೂಚನೆ ಕೊಟ್ಟಿದ್ದೇನೆ. ಇದು ಮಾದರಿ ಜಿಲ್ಲೆಯಾಗಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿದ್ದೇನೆ. ಜಿಲ್ಲೆಯಲ್ಲಿರುವ 1206 ಕೆರೆಗಳನ್ನು ಸರ್ವೆ ಮಾಡಲಾಗಿದೆ. ಕೆರೆ ಒತ್ತುವರಿ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. 84 ಕೆರೆಗಳ ಅತಿಕ್ರಮಣವನ್ನು ಈಗ ತೆರವು ಮಾಡಲಾಗಿದೆ. ಲೋಕಾಯುಕ್ತದಲ್ಲಿ 63 ವೈಯಕ್ತಿಕ ಪ್ರಕರಣಗಳು ದಾಖಲಾಗಿವೆ. ಕೆಲ ದೂರುಗಳನ್ನು ನಾವೇ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದೇವೆ ಎಂದರು.