ಬೆಂಗಳೂರು:- ಇಂದು ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ‘ಜನತಾ ದರ್ಶನ’ವನ್ನು ನಡೆಸಿದರು. 2 ತಿಂಗಳ ಹಿಂದೆಯೇ ನಡೆಯಬೇಕಿದ್ದ ‘ಜನತಾ ದರ್ಶನ’ ತಡವಾಗಿ ನಡೆದರೂ ಯಶಸ್ವಿಯಾಗಿ ಪೂರ್ಣವಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿಯನ್ನ ನೀಡಿದ್ದು, ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದ್ದು ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ ಇದನ್ನ ಸಹಿಸಲು ಆಗಲ್ಲ ಎಂದಿದ್ದಾರೆ ಸಿಎಂ.
ಅನೇಕ ಸಮಸ್ಯೆಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ನೀಡಲು ಸಾಧ್ಯ. ಆದ್ರೆ ಕೆಲ ಅರ್ಜಿಗಳು ಕೂಡಲೇ ತೀರ್ಮಾನ ಆಗಲ್ಲ, ಸಮಯ ಅಗತ್ಯ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದ್ರೆ ಅದು ಬೆಳೆಯುತ್ತ ಹೋಗುತ್ತದೆ. ಇಂದು ಬಂದಿರುವ ಅರ್ಜಿಗಳಲ್ಲಿ ಬಹುತೇಕ ಕಂದಾಯ, ಪೊಲೀಸ್ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುಟಿ ಇತ್ಯರ್ಥ ಸೇರಿದಂತೆ ವಸತಿ, ಉದ್ಯೋಗಕ್ಕೆ ಸಂಬಂಧಿಸಿದೆ ಎಂದಿದ್ದಾರೆ ಸಿಎಂ.
ವಿಶೇಷವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಖಾತೆ ಸೇರಿದಂತೆ ಪಹಣಿ, ಪೋಡಿ ಮಾಡಲು ನನ್ನ ಬಳಿ ಬರಬೇಕಾ? ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಕೆಲಸ ಮಾಡಿದ್ರೆ ಜನ ಬೆಂಗಳೂರಿಗೆ ಬರುವುದನ್ನ ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಯನ್ನ ಎಲ್ಲಾ ಡಿಸಿಗೆ ನೀಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್ ಠಾಣೆ, ಹಾಸ್ಟೆಲುಗಳು ಮತ್ತಿತರೆಡೆಗೆ ಭೇಟಿ ನೀಡಿ ಜನರ ಸಮಸ್ಯೆ ಬಗೆಹರಿಸಬೇಕು. ವಿಳಂಬ ನೀತಿಯೇ ಭ್ರಷ್ಟಾಚಾರಕ್ಕೆ ಕೂಡ ದಾರಿ ಮಾಡಿಕೊಡುತ್ತೆ. ಆದ್ದರಿಂದ ತಕ್ಷಣ ಜನರಿಗೆ ಸ್ಪಂದಿಸಬೇಕು. ಕಾನೂನು ರೀತಿ ಆಗದಿದ್ದರೆ ಆಗ ಹಿಂಬರಹವನ್ನ ನೀಡಬೇಕು. ಇಂದು ಸ್ವೀಕರಿಸಿದ ಅರ್ಜಿಗಳನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. 15 ದಿನದೊಳಗೆ ಇವುಗಳನ್ನು ವಿಲೇವಾರಿ ಮಾಡಬೇಕು. ನಿಯಮಾವಳಿ ಅಡಿಯಲ್ಲಿ ಅರ್ಜಿಗಳ ವಿಲೇವಾರಿಗೆ ಅವಕಾಶವಿಲ್ಲದೆ ಇದ್ದರೆ, ಹಿಂಬರಹ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಒಟ್ನಲ್ಲಿ ಇಂದು 3,500 ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಇವುಗಳನ್ನ ಪರಿಶೀಲಿಸಿ, ಕಾನೂನು ರೀತಿ ಪರಿಹಾರ ನೀಡಬೇಕು. ಸಾಧ್ಯವಾಗದಿದ್ರೆ ಕೂಡಲೇ ಹಿಂಬರಹ ನೀಡಬೇಕು. ತಳಹಂತದ ಅಧಿಕಾರಿಗಳು ಅರ್ಜಿಯನ್ನ ಇತ್ಯರ್ಥಪಡಿಸಿದ್ದಾರಾ ಇಲ್ವಾ ಎಂಬ ಬಗ್ಗೆ ನನ್ನ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.