ರಾಮನಗರ: ಮೂರು ಕ್ಷೇತ್ರಗಳು ಒಂದು ರೀತಿ ಕುರುಕ್ಷೇತ್ರವೇ ಆಗಿದ್ದವು. ಅದ್ರಲ್ಲೂ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಹೆಚ್ಡಿ ಕುಮಾರಸ್ವಾಮಿ ನಡುವಿನ ನೇರ ಸಮರವಾಗಿತ್ತು. ಇನ್ನೇನು ನವೆಂಬರ್ 23ಕ್ಕೆ ಫಲಿತಾಂಶ ಬರೋದಿದೆ. ಆದ್ರೆ ಅದಕ್ಕೂ ಮೊದಲೇ, ಜಮೀರ್ ಹೇಳಿಕೆ ಒಂದು ಕಡೆ ಲಾಭ ಆದ್ರೆ, ಒಂದಷ್ಟು ನಷ್ಟ ಆಗಿದೆ ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ. ನನಗಾಗಿ ಈ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವು ಸಚಿವರು ಕೆಲಸ ಮಾಡಿದ್ದಾರೆ. ಸಾಕಷ್ಟು ಶಾಸಕರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಡಿ.ಕೆ ಸುರೇಶ್ ವಿಶೇಷವಾಗಿ ಕೆಲಸ ಮಾಡಿದ್ದಾರೆ. ನನ್ನ ರಾಜಕೀಯ ಜೀವನದ ದೊಡ್ಡ ಚುನಾವಣೆ ಇದು. ಇಷ್ಟೊಂದು ತೀವ್ರತೆ ಪಡೆಯುತ್ತೆ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಇದು ಕುಮಾರಸ್ವಾಮಿ ಅವರಿಂದ ತೆರವಾದ ಕ್ಷೇತ್ರ, ಕುಟುಂಬಕ್ಕೆ ಉಳಿಸಿಕೊಳ್ಳಲು ಮುಂದಾದ್ರು. ರಾಜಕೀಯ ದೈತ್ಯ ನಾಯಕ ದೇವೇಗೌಡರ ಹಠ, ಮೊಮ್ಮಗನ ಗೆಲ್ಲಿಸುವ ಶಪಥ ಮಾಡಿದ್ರು. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರನನ್ನ ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಿದ್ರು. ಎರಡೂ ಕಡೆಯೂ ಸಮಬಲದ ಹೋರಾಟ ಇದೆ.
ಆದರೂ ಕೆಲವು ಸ್ಟೇಟ್ಮೆಂಟ್ ಹಾಗೂ ಮಾತುಗಳು ಜನರ ಭಾವನೆಗೆ ಘಾಸಿ ಮಾಡಿದೆ ಎಂದು ಬೇಸರ ಹೊರಹಾಕಿದ್ದಾರೆ. ಸಚಿವ ಜಮೀರ್ ಹೇಳಿಕೆ ಒಂದಷ್ಟು ಲಾಭ ಆದ್ರೆ ಒಂದಷ್ಟು ನಷ್ಟ ಆಗಿದೆ. ಮುಸ್ಲಿಂ ಮತಗಳ ಕ್ರೂಢೀಕರಣ ಒಂದುಕಡೆ ಆದ್ರೆ ಇನ್ನೊಂದು ಸಮುದಾಯಕ್ಕೆ ಹೊಡೆತ ಬಿದ್ದಿದೆ. ಅದರಿಂದ ಸ್ವಲ್ಪ ಆಘಾತ ಆಗಿದೆ. ನಿರಾಶಾದಾಯಕ ವಿಷಯ ಏನಿಲ್ಲ, ಯಾರೇ ಗೆದ್ರೂ ಕೂದಲೆಳೆ ಅಂತರದಲ್ಲಿ ಗೆಲ್ತೀವಿ ಎಂದು ಸಿಪಿವೈ ತಿಳಿಸಿದ್ದಾರೆ.