‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಈ ವಾರ ಕ್ಯಾಪ್ಟನ್ ಆಗಿರುವ ಸ್ನೇಹಿತ್ಗೆ ವಿಶೇಷ ಅಧಿಕಾರಗಳಿವೆ. ಇದರ ಅನುಸಾರ ಎರಡು ತಂಡಗಳಲ್ಲಿ ಯಾರ್ಯಾರು ಇರಬೇಕು ಅನ್ನೋದನ್ನ ಸ್ನೇಹಿತ್ ಅವರೇ ನಿರ್ಧಾರ ಮಾಡಬೇಕಿತ್ತು. ‘ಸ್ಪರ್ಧಿಗಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಎರಡೂ ತಂಡಗಳಲ್ಲಿ ಸಮನಾಗಿ ಇರುವಂತೆ ಎರಡು ತಂಡಗಳ ರಚನೆ ಆಗಬೇಕು’ ಎಂದು ‘ಬಿಗ್ ಬಾಸ್’ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಅದನ್ನ ಸ್ನೇಹಿತ್ ಗಂಭೀರವಾಗಿ ಪರಿಗಣಿಸಲೇ ಇಲ್ಲ!
ವಿನಯ್, ನಮ್ರತಾ ಹೇಳಿದ್ದನ್ನ ಮಾತ್ರ ಕಿವಿಗೆ ಹಾಕಿಕೊಂಡ ಸ್ನೇಹಿತ್.. ಸ್ಪಷ್ಟವಾಗಿ ಅವರಿಬ್ಬರು ಬಯಸಿದ ವರ್ತೂರು ಸಂತೋಷ್ ಅವರ ತಂಡಕ್ಕೆ ಫೇವರ್ ಆಗಿ ತಂಡವನ್ನ ರಚಿಸಿದರು. ‘’ಮೈಕಲ್ ನಮ್ಮ ತಂಡಕ್ಕೆ ಬೇಕು’’ ಎಂದು ಸಂಗೀತಾ ಬಾಯ್ಬಿಟ್ಟು ಕೇಳಿದರೂ, ಅದಕ್ಕೆ ಸ್ನೇಹಿತ್ ಒಪ್ಪಲಿಲ್ಲ. ‘’ಇದು ಕ್ಲಿಯರ್ ಆಗಿ ಅನ್ಫೇರ್ ಡಿಸಿಷನ್’’ ಎಂದಿದ್ದಾರೆ ಸಂಗೀತಾ. ಕ್ಯಾಪ್ಟನ್ ಆದ್ಮೇಲೆ ಪಕ್ಷಪಾತ ಮಾಡುತ್ತಿರುವ ಸ್ನೇಹಿತ್ ಬಗ್ಗೆ ‘’ಈ ವಾರಾಂತ್ಯದಲ್ಲಿ ಕ್ಲಾಸ್ ಪಕ್ಕಾ. ಎಷ್ಟು ಉಗಿಸಿಕೊಂಡರೂ ಬುದ್ಧಿ ಬಂದಿಲ್ಲ’’ ಎಂದು ಮಾತನಾಡಿಕೊಂಡಿದ್ದಾರೆ ಕಾರ್ತಿಕ್, ತನಿಷಾ ಮತ್ತು ಸಂಗೀತಾ.
ನಾಮಿನೇಷನ್ನಲ್ಲಿ ಫೇವರಿಸಂ
ಕ್ಯಾಪ್ಟನ್ ಆದ್ಮೇಲೆ ಸ್ನೇಹಿತ್ ದುಪ್ಪಟ್ಟು ಅಧಿಕಾರ ಪಡೆದರು. ಇದರ ಅನುಸಾರ ಈ ವಾರ ನಾಮಿನೇಟ್ ಮಾಡುವ ಅಧಿಕಾರ ಇದ್ದದ್ದು ಸ್ನೇಹಿತ್ಗೆ ಮಾತ್ರ. ತಮ್ಮ ಅಧಿಕಾರವನ್ನ ಬಳಸಿಕೊಂಡ ಸ್ನೇಹಿತ್, ತಮ್ಮ ‘ಅಣ್ಣ’ ವಿನಯ್ ಹಾಗೂ ನಮ್ರತಾ ಅವರನ್ನ ಸೇಫ್ ಮಾಡಿದರು.
ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ಅವರನ್ನ ಸೇಫ್ ಝೋನ್ನಲ್ಲಿಟ್ಟು ಕಾರ್ತಿಕ್, ತನಿಷಾ ಹಾಗೂ ಸಂಗೀತಾ ಅವರುಗಳನ್ನ ಸ್ನೇಹಿತ್ ನಾಮಿನೇಟ್ ಮಾಡಿದರು. ನಾಮಿನೇಷನ್ ಅಧಿಕಾರವನ್ನ ಸ್ನೇಹಿತ್ ಬಳಸಿಕೊಂಡ ಬಗೆಯಲ್ಲಿ ಸ್ಪಷ್ಟವಾಗಿ ಗ್ರೂಪಿಸಂ ಕಾಣಿಸಿತು. ಇದೀಗ ತಂಡಗಳ ರಚನೆಯಲ್ಲೂ ಸ್ನೇಹಿತ್ ವಿನಯ್ ಇರುವ ತಂಡಕ್ಕೆ ಫೇವರಿಸಂ ಮಾಡಿದ್ದಾರೆ.
ಎರಡು ತಂಡಗಳು
‘ಬಿಗ್ ಬಾಸ್’ ನೀಡಿದ್ದ ವಿಶೇಷ ಚಟುವಟಿಕೆಯಲ್ಲಿ ವರ್ತೂರು ಸಂತೋಷ್ ಅತೀ ಹೆಚ್ಚು ಬಿಳಿ ಹೂ ಪಡೆದರು. ಸಂಗೀತಾ ಅತೀ ಹೆಚ್ಚು ಕಪ್ಪು ಹೂ ಪಡೆದರು. ಹೀಗಾಗಿ, ಇವರಿಬ್ಬರನ್ನೇ ವಾರದ ಟಾಸ್ಕ್ಗಳಿಗೆ ಬೇಕಾಗಿರುವ ಎರಡು ತಂಡಗಳ ಕ್ಯಾಪ್ಟನ್ ಆಗಿ ‘ಬಿಗ್ ಬಾಸ್’ ನೇಮಿಸಿದರು.
ತಂಡಗಳ ನಾಯಕರನ್ನ ನೇಮಿಸಿದ ಬಳಿಕ, ‘’ಮನೆಯ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಹೊಂದಿರುವ ನಿಮಗೆ ಪ್ರತಿ ತಂಡದಲ್ಲಿ ನಾಯಕರನ್ನೂ ಸೇರಿಸಿ ತಲಾ 6 ಸದಸ್ಯರು ಇರುವಂತೆ ಎರಡೂ ತಂಡಗಳಿಗೂ ಸೂಕ್ತ ಕಾರಣಗಳೊಂದಿಗೆ ಸದಸ್ಯರನ್ನು ಸೇರ್ಪಡೆಗೊಳಿಸಬೇಕು. ನೀವು ರಚಿಸುವ ತಂಡಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮಬಲವಾಗಿರಬೇಕು. ನೆನಪಿರಲಿ.. ನೀವು ಯಾವ ತಂಡವನ್ನೂ ಸೇರಿಕೊಳ್ಳುವಂತಿಲ್ಲ’’ ಎಂದು ಸ್ನೇಹಿತ್ಗೆ ‘ಬಿಗ್ ಬಾಸ್’ ಸೂಚಿಸಿದರು.
‘’ಎಲ್ಲರೂ ಬಂದು ಯಾವ್ಯಾವ ಟೀಮ್ಗೆ ಹೋಗಬೇಕು ಅಂತ ಹೇಳಿದರೆ..’’ ಎಂದು ಸ್ನೇಹಿತ್ ಕೇಳಿದರು. ಆಗ, ‘’ಹಾಗೆ ಹೇಳುವಂತಿಲ್ಲ. ನಿಮ್ಮ ನಿರ್ಧಾರವನ್ನ ನೀವು ಹೇಳಬೇಕು’’ ಎಂದು ಕಾರ್ತಿಕ್, ತನಿಷಾ ವಾದಿಸಿದರು. ಆದರೆ, ‘’ಅರ್ಧ ಗಂಟೆ ಟೈಮ್ ಕೊಟ್ಟಿದ್ದಾರೆ. ನೀವು ಅವರನ್ನ ಕನ್ವಿನ್ಸ್ ಮಾಡಿ ಹೋಗಬಹುದು’’ ಎಂದರು ತುಕಾಲಿ ಸಂತು. ಹೀಗಾಗಿ, ಒಬ್ಬೊಬ್ಬರೂ ಮುಂದೆ ಬಂದು ತಾವು ಯಾವ ತಂಡಕ್ಕೆ ಹೋಗಲು ಬಯಸುತ್ತಾರೆ ಎಂದು ತಿಳಿಸಿದರು.