ಬೆಂಗಳೂರು:- ಎಷ್ಟು ಕೊಟ್ಟು ವಿಪಕ್ಷ ನಾಯಕರಾಗಿ ಬಂದ್ರಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ‌ ಹೇಳಿಕೆಗೆ ವಿಪಕ್ಷ ನಾಯಕ ಆರ್​​ ಅಶೋಕ್​ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊಟ್ಟು ಅಧಿಕಾರ ಪಡೆಯೋದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಕೊಟ್ಟು ಹೋಗುವ ಸಂಸ್ಕೃತಿ ಬಿಜೆಪಿಯದ್ದಲ್ಲ ಎಂದು ಹೇಳಿದ್ದಾರೆ.

ಸಿಎಂ ಆಗಲು ಸಿದ್ದರಾಮಯ್ಯ ಎಷ್ಟು ಹಣ ಕೊಟ್ಟಿದ್ದಾರೆ? ರಾಜ್ಯದಲ್ಲಿ ಕಡಿಮೆ ಅಂದ್ರೆ, ದೆಹಲಿ ಮಟ್ಟಕ್ಕೆ ಎಷ್ಟು ಕೊಟ್ಟು ಹೋಗಿದ್ದಾರೆ? ಪ್ರಿಯಾಂಕ್‌ ಅವರ ಅಪ್ಪ ಸಾವಿರಾರು ಕೋಟಿ ರೂ. ಕೊಟ್ಟು ಹೋಗಿರಬಹುದು ಎಂದು ವಾಗ್ದಾಳಿ ಮಾಡಿದ್ದಾರೆ.

ಜನ ನಮ್ಮನ್ನು ಗೆಲ್ಲಿಸಿರುವುದು ಸರ್ಕಾರದ ಕಿವಿ ಹಿಂಡಲು. ನಾವು ಕಿವಿ ಹಿಂಡುತ್ತೇವೆ, ಕಿವಿ ಹಿಂಡಿದ್ರೂ ಸರ್ಕಾರ ಕೆಲಸ ಮಾಡಿಲ್ಲ ಅಂದರೆ ಸರ್ಕಾರ ತೆಗೆಯಲು ಯೋಚನೆ ಮಾಡುತ್ತೇವೆ. ನಂತರ ಸರ್ಕಾರ ಬೀಳಿಸುವ ವ್ಯವಸ್ಥೆ ಅವರೇ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

ಕನಕಪುರದಲ್ಲಿ ಸೋತವರಿಗೆ ವಿಪಕ್ಷ ಸ್ಥಾನ ಎಂದು ಕಾಂಗ್ರೆಸ್​ ಟ್ವೀಟ್​ಗೆ ವಿಪಕ್ಷ ನಾಯಕ ಆರ್​.ಅಶೋಕ್​ ತಿರುಗೇಟು ನೀಡಿದ್ದು, ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರಲ್ವೇ? ಅವರನ್ನು
ಎಐಸಿಸಿ ಅಧ್ಯಕ್ಷರಾಗಿ ಮಾಡಿದ್ದೀರಲ್ಲಾ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ. ನಾನು ಕನಕಪುರ ಕ್ಷೇತ್ರದಲ್ಲಿ 55 ಸಾವಿರ ಮತಗಳನ್ನು ಪಡೆದಿದ್ದೇನೆ. ಅಂದರೆ ಸಿದ್ದರಾಮಯ್ಯಗಿಂತ 20 ಪಟ್ಟು ನಾನು ಮತ ಪಡೆದಿದ್ದೇನೆ. ನಾನು ವಿರೋಧ ಪಕ್ಷದ ನಾಯಕನಾಗಬಾರದಾ ಎಂದು ಪ್ರಶ್ನಿಸಿದ್ದಾರೆ.

ಸ್ಮೃತಿ ಇರಾನಿ ವಿರುದ್ಧ ನಿಮ್ಮ ನಾಯಕ ರಾಹುಲ್ ಸೋತಿಲ್ಲವೇ? ಇಂತಹ ನಾಯಕರನ್ನೆಲ್ಲ ಇಟ್ಟುಕೊಂಡು ನನ್ನನ್ನು ಪ್ರಶ್ನೆ ಮಾಡ್ತೀರಾ? ಸಿದ್ದರಾಮಯ್ಯ ರೀತಿ ನಾನೇನು ಭಯದಿಂದ ಬಾದಾಮಿಗೆ ಓಡಿ ಹೋಗಿಲ್ಲ. ಪಕ್ಷ ಹೇಳಿದ್ದಕ್ಕೆ ನಾನು ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು. ಪದ್ಮನಾಭನಗರ ಕ್ಷೇತ್ರದಲ್ಲಿ ನಾನು 7 ಬಾರಿ ಗೆದ್ದಿದ್ದೇನೆ. ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಡಿಪಾಸಿಟ್ ಬಂದಿಲ್ಲ. ನಾವು ಗೆದ್ದಿದ್ದೇವೆ ಎಂದರು.

Share.