ಬೆಂಗಳೂರು:- ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಬಳಕೆ ಕಾರಣ ಅನ್ನೋದು ಅಧಿಕೃತವಾಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿವೈ ವಿಜಯೇಂದ್ರ ದೆಹಲಿಗೆ ಕಂಪ್ಲೆಂಟ್ ಮಾಡಲಿಕ್ಕೆ ಹೊಗಿದ್ದರೆ ಸ್ವಾಗತ: ರಮೇಶ್ ಜಾರಕಿಹೊಳಿ!
ಈ ಸಂಬಂಧ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಗ್ಲುಕೋಸ್ ಬಳಕೆಗೆ ತಡೆ ನೀಡಲಾಗಿದೆ ಎಂದರು.
ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಬಳಕೆ ಕಾರಣವೇ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೂ ಅನುಮಾನದಿಂದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಈ ಬಾರಿಯೂ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್ ಗಳಲ್ಲಿ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್ ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್ ಗಳ ದ್ರಾವಣವನ್ನು ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು. ಬಳಿಕ ಸೆಂಟ್ರಲ್ ಡ್ರಗ್ ಲ್ಯಾಬೊರೇಟರಿಯಲ್ಲಿ ಪರೀಕ್ಷೆ ನಡೆಸಿದಾಗ ದ್ರಾವಣ ಬಳಸಬಹುದು ಎಂಬ ವರದಿ ಬಂದಿತ್ತು ಎಂದು ತಿಳಿಸಿದರು.
ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್ ಗಳನ್ನು ಅನರೋಬಿಕ್ ಟೆಸ್ಟ್ ಗೆ ಕಳುಹಿಸಿದ್ದೇವೆ. ಬಾಣಂತಿಯರ ಸಾವಿಗೆ ಐವಿ ದ್ರಾವಣ ಕಾರಣವೇ ಎಂಬುದಕ್ಕೆ ಪರೀಕ್ಷೆಯಲ್ಲಿ ಸ್ಪಷ್ಟತೆ ಸಿಗಲಿದೆ. ವಾರದಲ್ಲಿ ಈ ವರದಿ ಬರಲಿದೆ. ತದನಂತರ ಐವಿ ದ್ರಾವಣ ಬಳಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.