ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಾ. ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಶವ ಸಂಸ್ಕಾರ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
26 ನವೆಂಬರ್ ಅನ್ನು ಸಂವಿಧಾನ ಸಮರ್ಪಣಾ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದೇ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು. ಬಿಜೆಪಿ ಉದ್ದೇಶ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವುದು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದು ಮಹತ್ವದ ದಿನ. 1949 ನವೆಂಬರ್ 26 ರಂದು ಭಾರತೀಯರಿಗೆ ಪವಿತ್ರವಾದ ಸಂವಿಧಾನವನ್ನು ಅಂಗೀಕರಿಸಿದ ದಿನ. ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಶ್ರಮ ಮತ್ತು ದೂರದೃಷ್ಟಿಯು ಈ ನಮ್ಮ ಸಂವಿಧಾನವನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಬಾಸಾಹೇಬರ ಆಶಯವನ್ನು ಮೋದೀಜಿ ಅವರು ಅನುಷ್ಠಾನ ಮಾಡುತ್ತಿದ್ದಾರೆ. ಸಂವಿಧಾನವನ್ನು ಉಳಿಸುವ ಮಹತ್ವದ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ಇದೆ ಎಂದು ತಿಳಿಸಿದರು.