ಧಾರವಾಡ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮೆತ್ತಗಾಗಿದ್ದ ಧಾರವಾಡ ಗ್ರಾಮೀಣ ಪ್ರದೇಶದ ಜೂಜುಕೋರರು ಈಗ ಮತ್ತೆ ಬಾಲ ಬಿಚ್ಚಲು ಆರಂಭಿಸಿದ್ದಾರೆ. ಇಸ್ಪೀಟ್ ಅಡ್ಡೆ ಮೇಲೆಯ ದಾಳಿ ಮಾಡಲು ಹೋದ ಪೊಲೀಸರ ಮೇಲೆಯೇ ಜೂಜುಕೋರರು ದಾಳಿ ಮಾಡಿದ್ದು, ಇನ್ಸ್ಪೆಕ್ಟರ್ ಸೇರಿ ಇಬ್ಬರು ಸಿಬ್ಬಂದಿಗೆ ಗಾಯವಾಗಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಇಸ್ಪೀಟ್ ಆಟದ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ ಪಾಟೀಲ್,
ಜೀಪ್ ಚಾಲಕ ಶಿವಾನಂದ ಹುಬ್ಬಳ್ಳಿ, ಪೊಲೀಸ ಸಿಬ್ಬಂದಿ ಬಸನಗೌಡ್ ದಾಳಿ ಮಾಡಿದ್ದಾರೆ. ಈ ವೇಳೆ ಜೂಜುಕೋರರು ದಾಳಿಗೆ ಬಂದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾರೆ. ಇನ್ನೂ ಜೂಜುಕೋರರಿಂದ ಗಾಯವಾದ್ರೂ ಅದನ್ನು ಲೆಕ್ಕಿಸದೆ ಗ್ರಾಮೀಣ ಠಾಣೆಯ ಪೊಲೀಸರು 10 ಕ್ಕೂ ಹೆಚ್ಚು ಜೂಜುಕೋರರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,
ಗಾಯಾಳು ಪೊಲೀಸ್ ಅಧಿಕಾರಿಗಳು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಧಾರವಾಡ ನಗರ ಸೇರಿ ಗ್ರಾಮಾಂತರ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಪೊಲೀಸ್ ಇಲಾಖೆ ಯಾವುದಕ್ಕೂ ಜಗ್ಗದೇ ಜೂಜುಕೋರ ಕಿಂಗ್ ಪಿನ್ಗಳ ಹೆಡೆಮುರಿ ಕಟ್ಟಿ ಕುಟುಂಬಗಳ ನೆಮ್ಮದಿಗೆ ದಾರಿಯಾಗಬೇಕು ಎಂದು ಜನತೆ ಮನವಿ ಮಾಡುತ್ತಿದ್ದಾರೆ.