ಬೇಸಿಗೆಯಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದೆಂದರೆ ಮೈಯನ್ನು ತಂಪಾಗಿಸುತ್ತದೆ. ಇದರಿಂದ ದೇಹಕ್ಕೆ ಉಲ್ಲಾಸವಾ ಗುತ್ತದೆ. ಆರ್ದ್ರತೆ ಮತ್ತು ಶಾಖದಿಂದ ಪರಿಹಾರವನ್ನು ಪಡೆಯುತ್ತಾರೆ. ಕೆಲವರಂತೂ ಬೇಸಿಗೆ ಇರಲಿ, ಮಳೆ ಇರಲಿ, ಚಳಿ ಇರಲಿ ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅದರಲ್ಲೂ ಈಗ ಚಳಿಗಾಲ ಶುರುವಾಗುತ್ತಿರುವ ಹೊತ್ತಲ್ಲಿ, ಹೃದಯದ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಲೇಬೇಕು ಎಂಬುದು ಆರೋಗ್ಯ ತಜ್ಞರ ಕಟ್ಟುನಿಟ್ಟಿನ ಸಲಹೆ. ತಣ್ಣೀರ ಸ್ನಾನದಿಂದ ದೂರ ಇರಿ..
ನಮ್ಮಲ್ಲಿ ಅನೇಕರಿಗೆ ಸ್ನಾನಕ್ಕೆ ಬಿಸಿ ನೀರು ಬಳಕೆ ಮಾಡಿ ಅಭ್ಯಾಸ ಇರುವುದಿಲ್ಲ. ಮಳೆ, ಚಳಿ ಏನೇ ಇರಲಿ ತಣ್ಣೀರಿನಲ್ಲಿ ಸ್ನಾನ ಮಾಡಿದರೇ ಅದೇನೋ ಹಿತ..ಸಮಾಧಾನ ಎನ್ನುವವರು ಇದ್ದಾರೆ. ತಣ್ಣೀರ ಸ್ನಾನ ಉರಿಯೂತ ಕಡಿಮೆ ಮಾಡುತ್ತದೆ, ಒತ್ತಡ, ಆಯಾಸ ನಿವಾರಣೆ ಮಾಡುತ್ತದೆ ಎಂಬಿತ್ಯಾದಿ ಆರೋಗ್ಯ ಸಂಬಂಧಿ ಕಾರಣಕ್ಕೆ ತಣ್ಣೀರ ಸ್ನಾನ ರೂಢಿಸಿಕೊಂಡವರೂ ಅನೇಕರು ಇದ್ದಾರೆ. ಆದರೆ ಚಳಿಗಾಲದಲ್ಲಿ ಈ ತಣ್ಣೀರ ಸ್ನಾನ ಮಾರಣಾಂತಿಕವಾಗಬಹುದು. ಹೃದಯಕ್ಕೆ ಸಮಸ್ಯೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಹೃದಯದ ಕಾಯಿಲೆ ಇದ್ದರೆ ತಣ್ಣೀರಿನ ಸ್ನಾನ ಒಳ್ಳೆಯದೇ?
ನಿಮಗೆ ಯಾವುದೇ ಹೃದಯ ಕಾಯಿಲೆ ಇದ್ದರೆ, ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಪಾಯಕಾರಿ. ತಣ್ಣೀರಿಗೆ ನಿಮ್ಮ ದೇಹದ ಪ್ರತಿಕ್ರಿಯೆಯು ಹೃದಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಮತ್ತು ಅನಿಯಮಿತ ಹೃದಯ ಬಡಿತಗಳಿಗೆ ಕಾರಣವಾಗಬಹುದು. ಇದು ನಿಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ.
ಸಾಮಾನ್ಯವಾಗಿ ಯಾವುದೇ ಕಾಲದಲ್ಲಿ ತಣ್ಣೀರು ಸ್ನಾನ ಮಾಡುವ ಹೊತ್ತಲ್ಲಿ, ಒಂದು ಸಲ ನೀರನ್ನು ಮೈಮೇಲೆ ಸುರಿದುಕೊಂಡಾಗ ದೇಹ ಒಮ್ಮೆಲೇ ಅದಕ್ಕೆ ಸ್ಪಂದಿಸುವಾಗ, ಇಡೀ ದೇಹ ಝುಂ ಅನ್ನುತ್ತದೆ. ಅಂದರೆ ಒಂದು ಹಂತದ ಉಷ್ಣತೆಯಲ್ಲಿದ್ದ ದೇಹಕ್ಕೆ ತಣ್ಣೀರು ಸಣ್ಣ ಶಾಕ್ ನೀಡುತ್ತದೆ. ರಕ್ತನಾಳಗಳು ಸಂಕುಚಿತಗೊಂಡಂತಾಗುತ್ತದೆ. ಅದಾಗಲೇ ಹಾರ್ಟ್ ಸಮಸ್ಯೆ ಇರುವವರಿಗೆ ಇದು ನಿಜಕ್ಕೂ ಅಪಾಯಕಾರಿ.
ಆರೋಗ್ಯವಂತರೂ ಈ ಬಗ್ಗೆ ತುಸು ಎಚ್ಚರ ವಹಿಸುವುದು ಒಳಿತು. ಚಳಿಗಾಲದಲ್ಲಿ ನಿರಂತರವಾಗಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯವಂತ ಮನುಷ್ಯನೂ ಕಾಯಿಲೆ ಬೀಳಬಹುದು. ಶೀತ, ಕೆಮ್ಮು, ಜ್ವರದ ಆಚೆಯೂ ರಕ್ತನಾಳಗಳ ಸಂಕುಚನದಿಂದ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು ಬಿಪಿ ಇರುವವರಂತೂ ಹೆಚ್ಚುವರಿಯಾಗಿ ಗಮನಹರಿಸಬೇಕು ಎನ್ನುತ್ತಾರೆ
ಮೊದಲು ಉಗುರುಬೆಚ್ಚಗಿನ ಸ್ನಾನ
ನೀವೂ ತಣ್ಣೀರು ಸ್ನಾನ ಮಾಡಲು ಬಯಸಿದರೆ, ನೀವು ನೀರಿನ ತಾಪಮಾನವನ್ನು ಕಡಿಮೆ ಮಾಡಿದಂತೆ ನಿಮ್ಮ ದೇಹವನ್ನು ಸರಿಹೊಂದಿಸಲು ಸ್ವಲ್ಪ ಸಮಯವನ್ನು ನೀಡಬೇಕು. ನೀವು ನಿಮ್ಮ ಸ್ನಾನವನ್ನು ಉಗುರುಬೆಚ್ಚಗಿನ ನೀರಿನಿಂದ ಆರಂಭಿಸಬೇಕು ಮತ್ತು ನಂತರ ತಣ್ಣೀರಿಗೆ ಹೋಗಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಮೊದಲ 30 ಸೆಕೆಂಡುಗಳಲ್ಲಿ ನೀವು ಕೆಲವು ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯಬಹುದು, ಆದರೆ ಮೂರು ನಿಮಿಷಗಳ ನಂತರ ಪ್ರಯೋಜನಗಳು ಮಸುಕಾಗಲು ಆರಂಭವಾಗುತ್ತದೆ.
ಬಿಸಿ ನೀರಿನ ಸ್ನಾನ ಚರ್ಮಕ್ಕೆ ಹಾನಿಕಾರಕ
ಬಿಸಿನೀರಿನ ಸ್ನಾನವು ಚರ್ಮಕ್ಕೆ ತುಂಬಾ ಹಾನಿಕಾರಕ . ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇದು ಸಾಕಷ್ಟು ಉತ್ತಮವಾಗಿದೆ. ಎಸ್ಜಿಮಾ ಅಥವಾ ಸೋರಿಯಾಸಿಸ್ ನಂತಹ ಚರ್ಮದ ಸ್ಥಿತಿ ಇರುವ ಜನರು ಬಿಸಿನೀರಿನ ಸ್ನಾನದಿಂದ ತುರಿಕೆಯನ್ನು ಉಲ್ಬಣಗೊಳಿಸುತ್ತಾರೆ. ತಣ್ಣೀರಿನಿಂದ ಸ್ನಾನ ಮಾಡುವಾಗ ಚರ್ಮದ ಕೆಂಪು ಬಣ್ಣವನ್ನು ಕಡಿಮೆ ಮಾಡಬಹುದು. ನೀವು ಆರೋಗ್ಯವಂತ ವ್ಯಕ್ತಿಯಾಗಿದ್ದರೆ ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಚರ್ಮಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.
ತಣ್ಣೀರಿನ ಸ್ನಾನ ನಿಮಗೆ ಸೂಕ್ತವೇ ಮೊದಲು ತಿಳಿಯಿರಿ
ಸ್ನಾಯುವಿನ ಒತ್ತಡವನ್ನು ತಣ್ಣೀರಿನ ಸ್ನಾನದಿಂದ ನಿವಾರಿಸಬಹುದು, ಆದರೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವ ಜನರು ಇದನ್ನು ತಪ್ಪಿಸಬೇಕು. ಅವರು ಕೋಣೆಯ ಉಷ್ಣತೆ ಅಥವಾ ಉಗುರುಬೆಚ್ಚಗಿನ ನೀರಿನಿಂದ ಮಾತ್ರ ಸ್ನಾನ ಮಾಡುವ ಬಗ್ಗೆ ಯೋಚಿಸಬೇಕು.