ಬೆಳಗಾವಿ:- ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ತೀವ್ರಗೊಂಡಿದ್ದು, ಬೆಳಗಾವಿ ಲೋಕಸಭೆ ಅಖಾಡಕ್ಕೆ ಅಚ್ಚರಿ ಹೆಸರು ಎಂಟ್ರಿ ಕೊಟ್ಟಿದೆ. ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ ಕಾತರಕಿ ಅವರು ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಮಹದಾಯಿ, ಕೃಷ್ಣಾ, ಕಾವೇರಿ ಸೇರಿದಂತೆ ಅನೇಕ ವಿಚಾರದಲ್ಲಿ ಕರ್ನಾಟಕ ಪರ ಕಾತರಕಿ ವಾದ ಮಾಡಿದರು. ಬೆಳಗಾವಿ ಜಿಲ್ಲೆಯವರೇ ಆಗಿರೋ ಮೋಹನ ಕಾತರಕಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಘಟಾನುಟಿ ಕೈ ನಾಯಕರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.
ಕಳೆದ 40 ವರ್ಷಗಳಿಂದ ಕಾಂಗ್ರೆಸ್ ನೊಂದಿಗೆ ಮೋಹನ್ ಕಾತರಕಿ ನಂಟು ಹೊಂದಿದ್ದಾರೆ. ಈಗಾಗಲೇ ಬೆಳಗಾವಿ ಲೋಕಸಭೆಗೆ 12 ಜನ ಅರ್ಜಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಐವರ ಮಧ್ಯೆ ಈಗ ತೀವ್ರ ಪೈಪೋಟಿ ಕಾದಿದೆ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ,
ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಹೆಬ್ಬಾಳಕರ, ಕಿರಣ ಸಾಧುನವರ, ಗಿರೀಶ್ ಸೋನವಾಲಕರ, ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ ಮಧ್ಯೆ ಫೈಟ್ ಇದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಿರ್ಣಾಯಕ ಆಗಿದ್ದು, ಬೆಳಗಾವಿ ಲೋಕಸಭೆ ಚುನಾವಣೆ ಉಸ್ತುವಾರಿ ಸತೀಶ್ ಜಾರಕಿಹೊಳಿ ಹೆಗಲಿಗೆ ಇದೆ.
ಇಂದು ದೆಹಲಿಯಲ್ಲಿ ಅಭ್ಯರ್ಥಿ ಹೆಸರು ಅಂತಿಮ ಆಗೋ ಸಾಧ್ಯತೆ ಇದೆ.