ವಾಷಿಂಗ್ಟನ್:- ನಮ್ಮ ಉತ್ಪನ್ನಗಳ ಮೇಲೆ ಭಾರತ ಭಾರಿ ಸುಂಕ ವಿಧಿಸುತ್ತಿದೆ ಎಂದು ಶ್ವೇತಭವನ ಹೇಳಿದೆ.
ಭಾರತವು ಅಮೆರಿಕದ ಮದ್ಯದ ಮೇಲೆ ಶೇ.150 ಹಾಗೂ ಕೃಷಿ ಉತ್ಪನ್ನಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತಿದೆ ಎಂದು ಹೇಳಿದೆ. ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಶ್ವೇತಭವನ ಈ ರೀತಿಯ ಪ್ರತಿಕ್ರಿಯೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಿಂದ ಜಾರಿಗೆ ಬರುವಂತೆ ಹೊಸ ಸುಂಕ ಪದ್ಧತಿಯನ್ನು ಘೋಷಿಸಿದ್ದಾರೆ. ವಿವಿಧ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ವಿಧಿಸುವ ಸುಂಕದಷ್ಟೇ ಅಮೆರಿಕ ಕೂಡ ಆ ದೇಶದ ಉತ್ಪನ್ನಗಳ ಮೇಲೆ ಏಪ್ರಿಲ್ 2ರಿಂದ ಸುಂಕವನ್ನು ವಿಧಿಸಲಿದೆ. ಇದರ ಬೆನ್ನಲ್ಲೇ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಭಾರತ ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದರು. ಆದರೆ, ಸುಂಕ ಕಡಿತದ ಬಗ್ಗೆ ತಾನೂ ಯಾವುದೇ ಭರವಸೆಯನ್ನು ನೀಡಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೀವಿಟ್, ಡೊನಾಲ್ಡ್ ಟ್ರಂಪ್ ಅವರು ಭಾರತದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ. ಆದ್ರೆ ಅದಕ್ಕೆ ನ್ಯಾಯಯುತ ಮತ್ತು ಸಮತೋಲಿತ ವ್ಯಾಪಾರ ಪದ್ಧತಿಯು ಬೇಕೆಂಬುದು ಅವರ ವಾದ ಎಂದಿದ್ದಾರೆ.
ಸದ್ಯ ವಿಶ್ವದ ದೊಡ್ಡಣ್ಣ ಅಮೆರಿಕ ಸುಂಕದ ವಿಚಾರ ಬಿಡುವಂತೆ ಕಾಣುತ್ತಿಲ್ಲ. ಇಂದು ಶ್ವೇತಭವನ ನೀಡಿದ ಹೇಳಿಕೆ ಭಾರತದ ಮೇಲೆ ಕೆಂಗಣ್ಣು ಬೀರಿದಂತೆ ಕಾಣುತ್ತಿದೆ.