ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ಗಳು ಮತ್ತಷ್ಟು ಬಿಗಿಗೊಂಡಿದೆ. ಬೆಳಗ್ಗೆ ರಸಪ್ರಶ್ನೆ ಟಾಸ್ಕ್ನಲ್ಲಿ ಭಾಗಿಯಾದವರು ಎರಡನೇ ಚಟುವಟಿಕೆಯಲ್ಲಿ ಪರಸ್ಪರ ನೋವುಂಟು ಮಾಡಿಕೊಂಡಿದ್ದಾರೆ.
ರಸಪ್ರಶ್ನೆ ಆಟವಾಡಿದ್ದ ಸ್ಫರ್ಧಿಗಳಿಗೆ ಎರಡನೇ ಟಾಸ್ಕ್ ಸಖತ್ ಚಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಇದೆ. ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್ಗಳನ್ನು ಇಡಲಾಗಿದೆ. ಬಿಗ್ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಾಲ್ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಇದು ಟಾಸ್ಕ್ನ ಮೂಲ ನಿಯಮ.
ಯಾವ ತಂಡದವರು ಹೆಚ್ಚು ಬಾಲ್ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ. ಈ ಟಾಸ್ಕ್ನಲ್ಲಿ ಬಾಲ್ ಎತ್ತುವಾಗ ಎರಡೂ ತಂಡದ ನಡುವೆ ಭಾರೀ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಸಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.