ಮೈಸೂರು:- ವಿಶ್ವಕರ್ಮ ಎಂದರೆ ಬ್ರಹ್ಮ. ಬ್ರಹ್ಮನಿಂದಲೇ ಸೃಷ್ಟಿ. ಪ್ರತಿಯೊಂದು ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡರವರು ತಿಳಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಸಮಿತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ನಮ್ಮ ಕ್ಷೇತ್ರದಲ್ಲಿ ಸುಮಾರು ಮೂವತ್ತು ಸಾವಿರ ವಿಶ್ವಕರ್ಮ ಸಮುದಾಯದ ಜನರಿದ್ದಾರೆ. ನಾಡಿಗೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರವಿದೆ. ಮುಂದೆಯೂ ಸಹ ನಾಡಿಗೆ ವಿಶ್ವಕರ್ಮ ಸಮುದಾಯ ಬೇಕು. ಇಂತಹ ಕಾಯಕ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ನಾವು ಶ್ರಮಿಸುತ್ತೇವೆ. ಮಾನ್ಯ ಮುಖ್ಯಮಂತ್ರಿಗಳಿಗೂ ವಿಶ್ವಕರ್ಮ ಜನಾಂಗದ ಮೇಲೆ ಅತಿ ಹೆಚ್ಚು ಪ್ರೀತಿ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ನರಸಿಂಹರಾಜ ಕ್ಷೇತ್ರದ ವಿಧಾನಸಭಾ ಶಾಸಕರಾದ ತನ್ವೀರ್ ಸೇಠ್ ರವರು ಮಾತನಾಡಿ, ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಹಾಗೂ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಜಯಂತಿ ಕಾರ್ಯಕ್ರಮಗಳು ತಮ್ಮ ವೇದಿಕೆಯಾಗಿದೆ. ರಾಜ್ಯ ಸರ್ಕಾರ ಪ್ರಸ್ತುತ 52 ಮಹಾನ್ ವ್ಯಕ್ತಿಗಳ ಜಯಂತಿ ಮಹೋತ್ಸವವನ್ನು ಆಚರಣೆಗೆ ತಂದಿದ್ದು, ಸಂಘಟಿತ ಹಾಗೂ ಅಸಂಘಟಿತ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಬೆಳವಣಿಗೆಗೆ ಪೂರಕವಾದ ಚಿಂತನೆಗಳನ್ನು ಸರ್ಕಾರದ ಮುಂದಿಡಲು ಪೂರಕ ಮಾಧ್ಯಮವಾಗಿವೆ ಎಂದರು.
