ನಿವೃತ್ತ ಜೀವನದ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲವಾಗಿ ನಿಲ್ಲುವ ಎನ್ಪಿಎಸ್ ಸುರಕ್ಷಿತ ಹೂಡಿಕೆಯ ಯೋಜನೆಯಾಗಿದೆ. ಎನ್ಪಿಎಸ್ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ 1 ಲಕ್ಷ ರೂ.ವರೆಗೆ ನಿವೃತ್ತಿ ವೇತನ ಪಡೆಯಬಹುದು. ಭಾರತ ಸರ್ಕಾರ 2004ರ ಜನವರಿ 1ರಂದು ಎನ್ಪಿಎಸ್ ಅನ್ನು ಪರಿಚಯಿಸಿತು ಮತ್ತು ಐದು ವರ್ಷಗಳ ನಂತರ (2009) ಅದನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಈ ಯೋಜನೆಯು ಭಾರತದ ನಾಗರಿಕರಿಗೆ ವೃದ್ಧಾಪ್ಯದ ಭದ್ರತೆಯಾಗಿ ಪಿಂಚಣಿ ಮತ್ತು ಹೂಡಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.
ಪ್ರತಿ ತಿಂಗಳು 1 ಲಕ್ಷ ರೂ. ಹೀಗೆ ಪಡೆಯಿರಿ
ಪ್ರತಿ ತಿಂಗಳು 1 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ ಎನ್ನುವುದನ್ನು ಉದಾಹರಣೆ ಮೂಲಕ ನೋಡೋಣ. ನೀವು 18ನೇ ವಯಸ್ಸಿನಲ್ಲಿ ಪ್ರತಿ ತಿಂಗಳು ಎನ್ಪಿಎಸ್ನಲ್ಲಿ 3,475 ರೂ. ಹೂಡಿಕೆ ಮಾಡಲು ಆರಂಭಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಹೀಗೆ ಸುಮಾರು 47 ವರ್ಷ ನಿಯಮಿತವಾಗಿ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿ ಜೀವನದ ವೇಳೆ ಅಂದರೆ 65 ವರ್ಷ ವಯಸ್ಸಾದಾಗ ಪ್ರತಿ ತಿಂಗಳು 1 ಲಕ್ಷ ರೂ. ಲಭಿಸಲು ಅರಂಭವಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಹೂಡಿಕೆಯ ಮೊತ್ತ ಹೆಚ್ಚಾಗುತ್ತದೆ.
ಎನ್ಪಿಎಸ್ನ ವಿಶೇಷತೆ
ಎನ್ಪಿಎಸ್ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಅದರ ಮೂಲಕ ನಿಮ್ಮ ನಿವೃತ್ತಿ ಜೀವನವನ್ನು ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿಸಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. 18 ವರ್ಷದಿಂದ 70 ವರ್ಷ ವಯಸ್ಸಿನ ಯಾರು ಬೇಕಾದರೂ ಈ ಯೋಜನೆಯಡಿ ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡುವುದು ಅಗತ್ಯ.
ಖಾತೆಯನ್ನು ತೆರೆದ ನಂತರ 60 ವರ್ಷ ವಯಸ್ಸಿನವರೆಗೆ ಅಥವಾ ಯೋಜನೆಯ ಮುಕ್ತಾಯದವರೆಗೆ ಕೊಡುಗೆ ನೀಡಬೇಕು. 60ನೇ ವಯಸ್ಸಿನಲ್ಲಿ, ನೀವು ಈ ನಿಧಿಯ ಗರಿಷ್ಠ 60 ಪ್ರತಿಶತವನ್ನು ಹಿಂತೆಗೆದುಕೊಳ್ಳಬಹುದು. ಹೂಡಿಕೆಯ ಅವಧಿ ಮುಕ್ತಾಯದ ನಂತರ ಮಾಸಿಕ ಪಿಂಚಣಿಯ ಹೊರತಾಗಿ ನೀವು ಒಂದು ದೊಡ್ಡ ಮೊತ್ತವನ್ನು ಹಿಂಪಡೆಯುತ್ತೀರಿ.
ವಿಶೇಷ ಎಂದರೆ ಆನಿವಾಸಿ ಭಾರತೀಯರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದಾಗ್ಯೂ ಆರ್ಬಿಐ ಮತ್ತು ಫೆಮಾ ಸೂಚಿಸುವ ಷರತ್ತುಗಳು ಅನ್ವಯವಾಗುತ್ತವೆ. ಇನ್ನು ಒಸಿಐ (ಓವರ್ಸೀಸ್ ಸಿಟಿಜನ್ಸ್ ಆಫ್ ಇಂಡಿಯಾ) ಮತ್ತು ಪಿಐಒ (ಪರ್ಸನ್ ಆಫ್ ಇಂಡಿಯನ್ ಒರಿಜಿನ್) ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.