ಗಂಡ ಹೆಂಡಿರ ನಡುವಿನ ಸಂಬಂಧವು ಹಾಲು ಜೇನಿನಂತಿರಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದಾಗ ಸಂಸಾರದಲ್ಲಿ ಸದಾ ಸಂತೋಷ ನೆಲೆಸಲು ಸಾಧ್ಯ. ಮದುವೆಯಾದ ನಂತರ ಸಂಬಂಧವನ್ನು ಉಳಿಸಿಕೊಳ್ಳುವುದು ಪತಿ-ಪತ್ನಿ ಇಬ್ಬರ ಜವಾಬ್ದಾರಿಯಾಗಿದೆ. ಆದರೆ ಸಣ್ಣ ಪುಟ್ಟ ಮುನಿಸುಗಳು ದಾಂಪತ್ಯ ಜೀವನವನ್ನು ಹಾಳು ಮಾಡುತ್ತವೆ. ಆದ್ದರಿಂದ, ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತಕ್ಷಣವೇ ಪರಿಹರಿಸಿಕೊಳ್ಳುವುದು ಅವಶ್ಯಕ. ಅದಲ್ಲದೇ, ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಈ ಕೆಲವು ವಿಷಯಗಳಿಗೆ ಹೆಚ್ಚು ಗಮನ ಹರಿಸಿದರೆ ಇಬ್ಬರ ನಡುವಿನ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತವೆ.
ಆದರೆ ಚಾಣಕ್ಯ ಒಂದು ಸಲಹೆ ಕೊಟ್ಟಿದ್ದಾರೆ.
ಚಾಣಕ್ಯರು ನಮಗೆ ನೀಡಿರುವ ಅಂತಹ ಅನೇಕ ಜೀವನ ಮೌಲ್ಯಗಳಲ್ಲಿ ಇಂದು ಗುರು, ಪತ್ನಿ, ಸಂಬಂಧಿಕರು ಮತ್ತು ಧರ್ಮದ ಬಗ್ಗೆ ತಿಳಿದುಕೊಳ್ಳೋಣ.
ಆಚಾರ್ಯ ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ ‘ವಿದ್ಯಾಹೀನಂ ಗುರುಂ ತ್ಯಜೇತ್’ ಎಂದು ಹೇಳಿದ್ದಾರೆ. ಅಂದರೆ ಜ್ಞಾನವಿಲ್ಲದ ಗುರುವನ್ನು ನೀವು ತ್ಯಜಿಸಬೇಕು ಎಂಬುದಾಗಿದೆ. ಅಂದರೆ, ನಿಮ್ಮನ್ನು ಮಾತುಗಳಿಂದ ಪ್ರಚೋದಿಸುವ ಆದರೆ ನಿಮಗೆ ಜ್ಞಾನವನ್ನು ನೀಡಲು ಸಾಧ್ಯವಾಗದ ಗುರುಗಳಿಂದ ನೀವು ದೂರವಿರಬೇಕು. ಅಂತಹ ಗುರು ನಿಮ್ಮ ಭವಿಷ್ಯವನ್ನು ಕತ್ತಲೆಗೆ ತಳ್ಳಬಹುದು. ಜ್ಞಾನಾರ್ಜನೆಗಾಗಿ ನಾವು ಗುರುವನ್ನು ಹುಡುಕಿಕೊಂಡು ಹೋಗುತ್ತೇವೆ. ಅಂತಹ ಸನ್ನಿವೇಶದಲ್ಲಿ ಗುರುಗಳಿಗೇ ಜ್ಞಾನವಿಲ್ಲದಿದ್ದರೆ ಏನು ಪ್ರಯೋಜನವಲ್ಲವೇ.?
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಯಾವ ಪತ್ನಿ ಪತಿಯಿದ್ದರೂ ಪರಪುರುಷನೊಂದಿಗೆ ಸಂಬಂಧವನ್ನು ಹೊಂದಿರುತ್ತಾಳೋ, ಚಿಕ್ಕ ಪುಟ್ಟ ವಿಚಾರಗಳಿಗೂ ಜಗಳ ಮಾಡಿಕೊಂಡು ಆಗಾಗ್ಗೆ ತವರು ಮನೆಯನ್ನು ಸೇರಿಕೊಳ್ಳತ್ತಾಳೋ ಅಂತಹ ಹೆಂಡತಿಯನ್ನು ತ್ಯಜಿಸುವುದು ಉತ್ತಮವೆಂದು ಚಾಣಕ್ಯರು ಹೇಳಿದ್ದಾರೆ. ಚಿಕ್ಕ ಪುಟ್ಟ ವಿಚಾರಗಳಿಗೂ ಕೋಪಿಸಿಕೊಳ್ಳುವಂತಹ ಪತ್ನಿಯು ಎಂದಿಗೂ ತನ್ನ ಮನೆಯನ್ನು ಮತ್ತು ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ. ಹೆಂಡತಿಯಲ್ಲಿನ ಈ ಕೆಟ್ಟ ಗುಣಗಳು ಕೌಟುಂಬಿಕ ಸಾಮರಸ್ಯವನ್ನು ಒಡೆಯುತ್ತದೆ. ಕುಟುಂಬದಲ್ಲಿ ಆಗಾಗ್ಗೆ ವಾದ – ವಿವಾದಗಳು ನಡೆಯುವಂತೆ ಮಾಡುತ್ತಾಳೆ ಎಂದು ಹೇಳಲಾಗಿದೆ.
ಆಚಾರ್ಯ ಚಾಣಕ್ಯ ಹೇಳುವಂತೆ ಕರುಣೆ ಇಲ್ಲದ ಧರ್ಮವನ್ನು ತ್ಯಜಿಸಬೇಕು. ಅಂದರೆ ಕರುಣೆಯ ಪಾಠವನ್ನು ಕಲಿಸದ ಧರ್ಮದಿಂದ ವ್ಯಕ್ತಿಯು ದೂರವಾಗಬೇಕು. ಕರುಣೆ ಇಲ್ಲದ ಧರ್ಮ ಅರ್ಥಹೀನ ಎಂದು ಚಾಣಕ್ಯರು ಹೇಳಿದ್ದಾರೆ. ಕರುಣೆಯಿಂದ ತುಂಬಿರುವ ಧರ್ಮವೇ ನಿಜವಾದ ಧರ್ಮ ಎಂದು ಅವರು ನಂಬಿದ್ದರು.
ನಿಮ್ಮ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯದ ಭಾವನೆಗಳನ್ನು ಹೊಂದಿರದ, ನಿಮ್ಮ ಮೇಲೆ ದ್ವೇಷವನ್ನು ಹೊಂದಿರುವಂತಹ ಸಹೋದರ ಸಹೋದರಿಯರಿಂದ ನೀವು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಸ್ವಾರ್ಥಕ್ಕಾಗಿ ನಿಮ್ಮೊಂದಿಗೆ ಇರುವ ಅಥವಾ ನಿಮ್ಮ ಬಗ್ಗೆ ಕಿಂಚಿತ್ತು ಗೌರವ ಹಾಗೂ ಪ್ರೀತಿಯನ್ನು ಇಟ್ಟುಕೊಳ್ಳದೇ ಇರುವ ಸಹೋದರ, ಸಹೋದರಿಯರಿಂದ ದೂರವಿರಬೇಕು.
ಆಚಾರ್ಯ ಚಾಣಕ್ಯರು ಹೇಳಿರುವ ಈ ಮಾತುಗಳು ಇಂದಿಗೂ ನಮ್ಮ ಜೀವನದಲ್ಲಿ ನಡೆದುಕೊಂಡು ಬರುತ್ತಿದೆ. ಚಾಣಕ್ಯರು ಹೇಳಿದಂತೆ ನಾವು ಇಂತವರಿಂದ ದೂರವಿದ್ದಾಗಲೇ ನಮ್ಮ ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಲು ಸಾಧ್ಯವಾಗುವುದು. ಇಲ್ಲವಾದರೆ ಇಂತವರು ನಮ್ಮ ಸಮಯ, ಹಣ, ಗೌರವ ಎಲ್ಲವನ್ನೂ ಹಾಳು ಮಾಡಬಹುದು.