ಯಾದಗಿರಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಶ್ವಾಸವಿದೆ. ಒಂದು ವೇಳೆ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು. ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ವಿಚಾರವಾಗಿ ಮಾತನಾಡಿರುವ ಸ್ವಾಮೀಜಿ,
ಮಾರ್ಚ್ ತಿಂಗಳ ಒಳಗೆ ಸಿಎಂ ಮೀಸಲಾತಿ ನೀಡುತ್ತೇನೆಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ನಂಬಿಕೆ, ವಿಶ್ವಾಸವಿದೆ. ಸಿಎಂ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುತ್ತೆನೆಂದು ಭರವಸೆ ನೀಡಿದ್ದ ಮಾಜಿ ಸಿಎಂ ಬಿಎಸ್‍ವೈ ಮೀಸಲಾತಿ ಕಲ್ಪಿಸದೇ ದ್ರೋಹ ಬಗೆದಿದ್ದಾರೆ. ಬಿಎಸ್‍ವೈ ಮೇಲೆ 10 ವರ್ಷ ನಾವು ನಂಬಿಕೆ ಇಟ್ಟಿದ್ದೆವು. ಆದರೆ ಅವರು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ, ಮಂತ್ರಿ ಸ್ಥಾನಕ್ಕಿಂತ ಮೀಸಲಾತಿ ಕಲ್ಪಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಹೋರಾಟ ನಡೆಸುತ್ತೇವೆ. ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸಿದರೆ ಸಮಾಜದ ಜನರಿಗೆ ಅನುಕೂಲವಾಗುತ್ತದೆ. ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟು ಮೀಸಲಾತಿ ಸೌಲಭ್ಯ ಕಳೆದುಕೊಳ್ಳುವುದು ಬೇಡ ಅಂತ ತಮ್ಮ ಸಮಾಜದ ಶಾಸಕರಿಗೆ ಕಿವಿಮಾತು ಹೇಳಿದರು.
