ಬೆಂಗಳೂರು:– ಯತೀಂದ್ರ ಜವಾಬ್ದಾರಿಯುತ ನಾಯಕ, ಅವರ ಮಾತನ್ನು ತಿರುಚುವ ಅಗತ್ಯವಿಲ್ಲ ಎಂದು DCM ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರ ಐದು ವರ್ಷ ಬಲಿಷ್ಠವಾಗಿರುತ್ತದೆ. ಸಿದ್ದರಾಮಯ್ಯ ಅವರು ಈಗ ನಮ್ಮ ಮುಖ್ಯಮಂತ್ರಿಗಳು. ಅವರು ಮುಖ್ಯಮಂತ್ರಿಯಾಗಿ, ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ ಇಬ್ಬರೂ ಒಟ್ಟಿಗೆ ಚುನಾವಣೆ ನಡೆಸುತ್ತೇವೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
ಆಸೆ ಪಡುವುದು, ಜನರಿಗೆ ಶಕ್ತಿ ನೀಡುವಂತೆ ಕೇಳುವುದು ತಪ್ಪಲ್ಲ. ನಮ್ಮ ಭಾಗದಲ್ಲಿ ನಾನು ಕೂಡ ಶಕ್ತಿ ನೀಡುವಂತೆ ಜನರ ಬಳಿ ಕೇಳುತ್ತೇನೆ. ಅದನ್ನು ತಿರುಚುವ ಅಗತ್ಯವಿಲ್ಲ. ಯತೀಂದ್ರ ಬಹಳ ಜವಾಬ್ದಾರಿಯುತ ನಾಯಕ. ನಾವು ಅವರಿಗೆ ಪ್ರೋತ್ಸಾಹ ನೀಡುತ್ತೇವೆ. ಶಿವಕುಮಾರ್ ಅವರಿಗೆ ಅಧಿಕಾರ ಸಿಗಬಾರದು ಎಂಬ ಅಧಿಕಾರ ಹಂಚಿಕೆ ಸೂತ್ರ ಕಾಂಗ್ರೆಸ್ನಲ್ಲಿ ಆಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅವರ ಪಕ್ಷದ ವಿಚಾರ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.