ಬೀದರ್ ;- ಮತ್ತೊಮ್ಮೆ ಮೋದಿ ಗೆದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ನಕಲಿ ರಾಷ್ಟ್ರವಾದಿಗಳಾಗಿದ್ದು, ಇಂಥವರಿಗೆ ಎಲ್ಲರೂ ಸೇರಿಕೊಂಡು ಸೋಲಿಸಬೇಕಾಗಿದೆ ಎಂದರು. ಕೋಮುವಾದಿ ಬಿಜೆಪಿ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಬೇಕು.
ಬೀದರ್ ಜಿಲ್ಲೆಯಲ್ಲಿ ನಾವಿಬ್ಬರೂ ಶಾಸಕರಾಗಿ ಗೆದ್ದು ಸಚಿವರಾಗಿದ್ದೇವೆ. ರಾಜ್ಯದಲ್ಲಿ ನಮ್ಮ ಸರ್ಕಾರ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಈಗ ನಮ್ಮ ಯೋಜನೆಗಳು ಜನರಿಗೆ ತಿಳಿ ಹೇಳುವ ಕೆಲಸ ಮಾಡಬೇಕಾಗಿದೆ ಎಂದರು.
ನಮ್ಮ ಸರ್ಕಾರದ ಶಕ್ತಿ, ಗೃಹಲಕ್ಷ್ಮಿ, ಉಚಿತ ವಿದ್ಯುತ್, ಅನ್ನ ಭಾಗ್ಯ ಹೀಗೆ ವಿವಿಧ ಯೋಜನೆಗಳಡಿ ಜಿಲ್ಲೆಗೆ ಸುಮಾರು 1400 ಕೋಟಿ ರು. ಅವರವರ ಖಾತೆಗೆ ನೇರವಾಗಿ ಸೇರುತ್ತಿದೆ. ಬರುವ ಜನವರಿಯಲ್ಲಿ ನಿರುದ್ಯೋಗ ಪದವೀಧರರಿಗೆ ಕೂಡ ಸೌಲಭ್ಯ ನೀಡುತ್ತೇವೆ ಎಂದ ಅವರು, ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗಿದ್ದರಿಂದ ಮಧ್ಯಪ್ರದೇಶ, ರಾಜಸ್ಥಾನದಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹುಮ್ಮಸ್ಸು ಬಂದಿದೆ ಎಂದರು.
ಲೋಕಸಭೆಯ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಲಿ, ನಾನೇ ನಿಂತಿದ್ದೇನೆ ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಪಕ್ಷವು ಯಾರಿಗೆ ಅಭ್ಯರ್ಥಿ ಮಾಡುತ್ತದೆ ಎಂಬುವುದು ವರಿಷ್ಠರಿಗೆ ಬಿಟ್ಟ ವಿಷಯವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.